ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬು ಬೆಲೆಯ ಹೆಚ್ಚಳಕ್ಕಾಗಿ ನಡೆಯುತ್ತಿದ್ದ ರೈತರ ಹೋರಾಟದಲ್ಲಿ ಕಬ್ಬು ರಾಶಿಗೆ ಬಿದ್ದ ಬೆಂಕಿ ಈಗ ಗಂಭೀರ ಸಂಶಯಗಳಿಗೆ ಕಾರಣವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಕಬ್ಬು ರಾಶಿಗೆ ಬೆಂಕಿ ಹಚ್ಚಿದ್ದನ್ನು ಕಂಡು, “ಇದು ರೈತರ ಕೆಲಸವಲ್ಲ, ಪೂರ್ವ ನಿಯೋಜಿತ ದುಷ್ಕೃತ್ಯ” ಎಂಬ ಮಾತು ಸ್ಥಳೀಯರಲ್ಲಿ ಜೋರಾಗಿದೆ. ಘಟನೆ ನಡೆದ ರೀತಿ, ಪೆಟ್ರೋಲ್-ಡೀಸೆಲ್ ಲಭ್ಯತೆ ಹಾಗೂ ಬೆಂಕಿ ಹಚ್ಚಿದ ವಿಧಾನ ಪೊಲೀಸ್ ತನಿಖೆಗೆ ಹೊಸ ತಿರುವು ನೀಡಿದೆ.
ಘಟನಾ ಸ್ಥಳದಲ್ಲಿ ಅನೇಕ ಟ್ರ್ಯಾಕ್ಟರ್‌ಗಳಿಗೆ ದುಷ್ಕರ್ಮಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಆಶಂಕೆ ವ್ಯಕ್ತವಾಗಿದೆ. ಇದರ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಕ್ಷಣದಲ್ಲಿ ಕರಕಲಾಯಿತು. ಹಲವರು ಗಾಯಗೊಂಡಿದ್ದು, ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ, ಇದೊಂದು ಹೊರಗಿನಿಂದ ನಡೆಸಿದ ಯೋಜಿತ ಕೃತ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಸಮಿರವಾಡಿ ಕಾರ್ಖಾನೆಯಲ್ಲಿ 96 ಟ್ರ್ಯಾಲಿಗಳಲ್ಲಿ ಲೋಡ್ ಆಗಿದ್ದ 1033 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದ್ದು, ಇದರ ಮೌಲ್ಯ ರೂ. 34,08,900 ಎಂದು ಅಂದಾಜಿಸಲಾಗಿದೆ. ಒಟ್ಟು 42 ವಾಹನಗಳು ಹಾನಿಗೊಳಗಾದ ಈ ಅವಘಡದಲ್ಲಿ 12 ಟ್ರ್ಯಾಕ್ಟರ್ ಇಂಜಿನ್‌ಗಳು, ಒಂದು ಟ್ರ್ಯಾಕ್ಟರ್, 8 ಬೈಕ್‌ಗಳು, 3 ಟ್ಯಾಂಕರ್‌ಗಳು, ಒಂದು ಪೊಲೀಸ್ ಬಸ್ ಮತ್ತು 17 ಟ್ರ್ಯಾಕ್ಟರ್ ಟ್ರೇಲರ್‌ಗಳು ಸುಟ್ಟು ಕರಕಲಾಗಿವೆ. ಪ್ರಾಥಮಿಕ ಅಂದಾಜು ಪ್ರಕಾರ ಸುಮಾರು 30 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
ಈ ನಡುವೆ, ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಕಾರ್ಖಾನೆ ಮುಂದಾಗಿದ್ದು, ಪ್ರಕರಣದ ಹಿಂದೆ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಗಂಭೀರ ತನಿಖೆ ಮುಂದುವರೆಸಿದ್ದಾರೆ.

