ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸಂಖ್ಯೆ ವಿಚಾರವಾಗಿ ಬಿಜೆಪಿ ನಾಯಕಿ ನವನೀತ್ ರಾಣಾ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಹಿಂದು ಕುಟುಂಬಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು ಎಂಬ ರಾಣಾ ಹೇಳಿಕೆಗೆ AIMIM ಮುಖ್ಯಸ್ಥ ಅಸದುದ್ದೀನ್ ಓವೈಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, “ನನಗೆ ಆರು ಮಕ್ಕಳು ಇದ್ದಾರೆ, ನೀವು ನಾಲ್ಕು ಮಕ್ಕಳನ್ನು ಹೊಂದುವುದನ್ನು ತಡೆಯುವವರು ಯಾರು?” ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಇರುವವರಿಗೆ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ಬಂಧವಿದೆ. ತೆಲಂಗಾಣದಲ್ಲಿಯೂ ಇದೇ ರೀತಿಯ ನಿಯಮ ಜಾರಿಯಲ್ಲಿದೆ. ಇತ್ತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಮ್ಮುಖದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳ ಅಗತ್ಯದ ಕುರಿತು ಮಾತನಾಡಿದ್ದುದನ್ನು ಓವೈಸಿ ಉಲ್ಲೇಖಿಸಿದರು. ಹೀಗಿರುವಾಗ, ಜನಸಂಖ್ಯೆ ವಿಚಾರದಲ್ಲಿ ದ್ವಂದ್ವ ನೀತಿ ನಡೆಯುತ್ತಿದೆ ಎಂಬ ಸಂದೇಶ ನೀಡಿದ್ದಾರೆ.
ಇದನ್ನೂ ಓದಿ: Kitchen tips | ಅಡುಗೆಯ ಜೊತೆಗೆ ಆರೋಗ್ಯಕ್ಕೂ ಬೇಕಾಗೋ ಮಸಾಲೆ ಇದು! ಖಾಲಿಯಾಗೋಕೆ ಬಿಡ್ಬೇಡಿ
ನವನೀತ್ ರಾಣಾ ತಮ್ಮ ಹೇಳಿಕೆಯಲ್ಲಿ, ಕೆಲವರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೊಂದುವ ಮೂಲಕ ದೇಶದ ಸ್ವರೂಪ ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ, ಹಿಂದು ಕುಟುಂಬಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕು ಎಂದು ಅವರು ಕರೆ ನೀಡಿದ್ದರು. “ಒಂದು ಮಗುವಿಗೆ ತೃಪ್ತರಾಗುವುದು ಸರಿಯಲ್ಲ” ಎಂಬುದು ಅವರ ವಾದವಾಗಿತ್ತು.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಜನಸಂಖ್ಯೆ ನಿಯಂತ್ರಣ, ಕಾನೂನು ಮತ್ತು ರಾಜಕೀಯ ಹೊಣೆಗಾರಿಕೆ ಕುರಿತ ಚರ್ಚೆಗೆ ಮತ್ತೆ ತುಪ್ಪ ಸುರಿದಂತಾಗಿದೆ.

