ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ನಾನು ಮಾತ್ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜನರು ಅವರನ್ನು ಪಕ್ಷಾತೀತ ಎಂದು ಭಾವಿಸುತ್ತಾರೆ. ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಾರೋ ಅವರೇ ರಾಷ್ಟ್ರೀಯ ನಾಯಕರ ಆಯ್ಕೆಯಾಗಿರುತ್ತಾರೆ.
ಈ ಹಿಂದೆ ಕೂಡ ವರುಣಾದಲ್ಲಿ ನನಗೆ ಟಿಕೆಟ್ ಕೈ ತಪ್ಪಿತ್ತು. ಆದರೆ, ಅದು ವರಿಷ್ಠರ ತೀರ್ಮಾನ ಎಂದುಕೊಂಡು ಪಕ್ಷದ ಕೆಲಸ ಮಾಡಿದ್ದೇನೆ. ಈಶ್ವರಪ್ಪ ಹಿರಿಯರು ಸೂಕ್ತ ನಿರ್ಧಾರಗಳನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತಾರೆ ಎಂದರು.
ಜೆಡಿಎಸ್ ಮೈತ್ರಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಏನು ಚರ್ಚೆಯಾಗಿದೆಯೋ ಗೊತ್ತಿಲ್ಲ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಎಲ್ಲವನ್ನೂ ಸ್ಪಷ್ಟಪಡಿಸಲಾಗುವುದು. ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ರಾಷ್ಟ್ರೀಯ ನಾಯಕರ ನಿರ್ಧಾರ. ಅದನ್ನು ಗೌರವಿಸಬೇಕು ಎಂದರು.