ಹೆಚ್ಚು ಟಿಕೆಟ್​ ಮಾರಾಟ ಮಾಡಿದ್ದು ಯಾಕೆ? ದೆಹಲಿ ಕಾಲ್ತುಳಿತದ ಬಗ್ಗೆ ರೈಲ್ವೆ ಇಲಾಖೆಗೆ ಹೈಕೋರ್ಟ್ ತರಾಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬುಧವಾರ ದೆಹಲಿ ಹೈಕೋರ್ಟ್ ರೈಲ್ವೆ ಇಲಾಖೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ವಿಚಾರಣೆ ವೇಳೆಯಲ್ಲಿ ರೈಲ್ವೆ ಇಲಾಖೆಯನ್ನು ತರಾಟೆಗೆ ತಗೆದುಕೊಂಡ ನ್ಯಾಯಾಲಯವು, ರೈಲಿನ ಬೋಗಿಯಲ್ಲಿ ಪ್ರಯಾಣಿಕರ ಸಾಮರ್ಥ್ಯಕ್ಕಿಂತ ಹೆಚ್ಚಿನ ಟಿಕೆಟ್‌ಗಳನ್ನು ಮಾರಾಟ ಮಾಡುವ ಅಗತ್ಯವೇನಿತ್ತು ಎಂದು ಖಾರವಾಗಿ ಪ್ರಶ್ನಿಸಿದೆ.

ಇದು ರೈಲ್ವೆ ಕಾಯ್ದೆಯ ಸೆಕ್ಷನ್ 57ರ ಉಲ್ಲಂಘನೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದೆ.

ಭವಿಷ್ಯದಲ್ಲಿ ರೈಲು ನಿಲ್ದಾಣಗಳಲ್ಲಿ ಕಾಲ್ತುಳಿತ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಲಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಒಂದು ಬೋಗಿಯಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿಪಡಿಸಿದರೆ, ನೀವು ಅದಕ್ಕಿಂತಲೂ ಹೆಚ್ಚಿನ ಟಿಕೆಟ್​​ ಅನ್ನು ಯಾಕೆ ಮಾರಾಟ ಮಾಡುತ್ತೀರಿ? ಮಾರಾಟವಾದ ಟಿಕೆಟ್‌ಗಳ ಸಂಖ್ಯೆ ಆ ಸಂಖ್ಯೆಯನ್ನು ಮೀರುವುದೇಕೆ? ಎಂದು ರೈಲ್ವೆಯ ವಿರುದ್ದ ಕೆಂಡ ಕಾರಿದೆ.

ಆ ದಿನ (ಕಾಲ್ತುಳಿತ ನಡೆದ ದಿನ) ನಿಲ್ದಾಣದಲ್ಲಿ ಎಷ್ಟು ಲಕ್ಷ ಜನರು ಇದ್ದರು ಎಂದು ನಿಮಗೆ ತಿಳಿದಿದೆಯೇ? ಮೂಲಸೌಕರ್ಯದಿಂದ ಆ ರೀತಿಯ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದಿರಬಹುದು. ನಂತರದ ಕ್ರಮವನ್ನು ಯಾಕೆ ತಗೆದುಕೊಂಡಿಲ್ಲ. ಇನ್ನು ನಿಮ್ಮ ನಿರ್ಲಕ್ಷ್ಯವನ್ನು ಹೇಳಿಕೊಳ್ಳಲು ಇದು ರೈಲ್ವೆ ಅಪಘಾತದಂತಲ್ಲ ಎಂದು ನ್ಯಾಯಮೂರ್ತಿ ಗೆಡೆಲಾ ಹೇಳಿದರು.

ರೈಲ್ವೆ ಕಾಯ್ದೆಯ ಸೆಕ್ಷನ್ 57 ಅನ್ನು ಉಲ್ಲೇಖಿಸಿ, ಗರಿಷ್ಠ ಪ್ರಯಾಣಿಕರನ್ನು ನಿಗದಿಪಡಿಸುವುದು ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟವನ್ನು ಪರಿಶೀಲಿಸಲು ಹೈಕೋರ್ಟ್ ರೈಲ್ವೆ ಇಲಾಖೆಗೆ ಆದೇಶಿಸಿತು.

ಈ ವೇಳೆ, ನೀವು ಸರಳವಾದ ವಿಷಯವನ್ನು ಸಕಾರಾತ್ಮಕ ರೀತಿಯಲ್ಲಿ ಕಾರ್ಯಗತಗೊಳಿಸಿದರೆ, ಅಂತಹ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು ಎಂದರಿವ ನ್ಯಾಯಾಲಯವು ಜನಸಂದಣಿಯು ವಿಪರೀತ ವಿದ್ದ ಸಂದರ್ಭದಲ್ಲಿ ರೈಲಿನ ಬೋಗಿಗಳನ್ನು ಹೆಚಿಸಬಹುದಿತಲ್ಲ ಎಂದಿರುವ ನ್ಯಾಯಾಲಯವು, ನೀವು (ರೈಲ್ವೆ) ಇದನ್ನು ಸರಿ ಪಡಿಸಿಲ್ಲ ಎಂದು ಹೇಳಿದೆ. ಏತನ್ಮಧ್ಯೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಘಟನೆಯನ್ನು ದುರದೃಷ್ಟಕರ ಮತ್ತು ಸರ್ಕಾರದ ಪರಿಹಾರವು ಜೀವಹಾನಿಗೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!