Monday, December 8, 2025

ಮಹಿಳೆಯರಿಗ್ಯಾಕೆ ನಾರ್ಮಲ್‌ ಡೆಲಿವರಿ ಬಗ್ಗೆ ಭಯ? ಸಿಝೇರಿಯನ್‌ ಸಂಖ್ಯೆ ಹೆಚ್ಚಾಗಿರೋದ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಚ್ಚು ಅಭಿವೃದ್ಧಿ ಹಾಗೂ ಪೌಷ್ಠಿಕಾಂಶ ಹೊಂದಿರುವ ಭಾಗಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. ಗರ್ಭಿಣಿಯರಲ್ಲಿ ಸಹಜ ಹೆರಿಗೆ ಕುರಿತು ಮೂಡಿರುವ ಆತಂಕದ ಪರಿಣಾಮ ಸಿಸೇರಿಯನ್ ಹೆರಿಗೆಗೆ ಕುಟುಂಬಸ್ಥರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ, ಗರ್ಭಿಣಿಯರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನಪರಿಷತ್ ಕಲಾಪದಲ್ಲಿ, ಪ್ರತಿಪಕ್ಷ ಸದಸ್ಯ ಗೋವಿಂದರಾಜು, ಕೋಲಾರ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಅಧಿಕವಾಗುತ್ತಿದೆ. ಇದಕ್ಕೆ ಅಪೌಷ್ಠಿಕತೆ ಒಂದು ಕಾರಣವಾದರೆ, ಖಾಸಗಿ ಆಸ್ಪತ್ರೆಗಳ ಪ್ರಭಾವ ಅಧಿಕವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವರು, ಹಣಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದು. ಆದರೆ ಗರ್ಭಿಣಿಯರಲ್ಲಿ ಸಹಜ ಹೆರಿಗೆಯ ಬಗ್ಗೆ ಆತಂಕವಿದೆ. ಹೆಚ್ಚು ಶಿಕ್ಷಣ ಹೊಂದಿರುವ ಜಿಲ್ಲೆಗಳ ಕುಟುಂಬಸ್ಥರು ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡುತ್ತಿದ್ದಾರೆ. ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿಕೊಳ್ಳುವಂತೆ ಸಾಮಾಜಿಕ ಅರಿವು ಮೂಡಿಸಲಾಗುವುದು ಎಂದರು.

ಆರೋಗ್ಯ ಇಲಾಖೆಯಿಂದ ಸಿಸೇರಿಯನ್ ಹೆರಿಗೆ ಕುರಿತು ತುಮಕೂರು ಜಿಲ್ಲೆಯಲ್ಲಿ ಪರಿಶೀಲಿಸಲಾಗಿದೆ. ಅಲ್ಲಿ ಶೇ.75ರಿಂದ 80ರಷ್ಟು ಸಿಸೇರಿಯನ್ ಹೆರಿಗೆಯಾಗಿರುವುದು ಕಂಡುಬಂದಿದೆ. ಸಿಸೇರಿಯನ್ ಮಾಡಿದರೆ ಹೆಚ್ಚು ಹಣ, ಕಡಿಮೆ ಕೆಲಸದಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಹೆರಿಗೆಗೆ ಮುಂದಾಗುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಹೆರಿಗೆಗೆ ವೈದ್ಯರು ಶಿಫಾರಸು ಮಾಡಿ ಅಕ್ರಮ ಹಣ ಸಂಪಾದನೆ ಮಾಡುತ್ತಾರೆ ಎಂಬ ಗೋವಿಂದರಾಜು ಅವರ ಆರೋಪಕ್ಕೆ ಉತ್ತರಿಸಿದ ಸಚಿವರು, ಅಪರೂಪದ ಸಂದರ್ಭದಲ್ಲಿ ಮಾತ್ರ ಸರ್ಕಾರಿ ವೈದ್ಯರೂ ಶಿಫಾರಸು ಮಾಡಿರಬಹುದು. ಎಲ್ಲಾ ಸಂದರ್ಭಗಳಲ್ಲಿ ಮಾಡುವಂತಿಲ್ಲ. ಒಂದು ವೇಳೆ ಅನಗತ್ಯ ಶಿಫಾರಸು ಮಾಡಿರುವುದು ಕಂಡುಬಂದರೆ ಅಂತಹ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

error: Content is protected !!