ಹೊಸದಿಗಂತ ವರದಿ ಹುಬ್ಬಳ್ಳಿ:
ಆರ್ ಸಿಬಿ ತಂಡ ವಿಜಯೋತ್ಸವ ಸಮಾರಂಭ ಮಾಡಬಾರದು ಎಂದು ಪೊಲೀಸ್ ಇಲಾಖೆ ಹೇಳಿದರೂ ಸಹ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕ್ರೆಡಿಟ್ ಪಡೆಯಲು ಮಾಡಿದ್ದು, ಇದರಿಂದ 11 ಜನ ಅಮಾಯಕರು ಮೃತಪಟ್ಟಿದ್ದಾರೆ. ಇವರಿಬ್ಬರಿಗೂ ನೈತಿಕತೆ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ನಿಮ್ಮ ಕಾರ್ಯಕರ್ತ ಗುಪ್ತಚರ ಇಲಾಖೆಯ ಮುಖ್ಯಸ್ಥ ಹೇಮಂತ ಲಿಂಬಾಳಕರ ಏನು ಮಾಡುತ್ತಿದ್ದರು. ಈಗ ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಇಲ್ಲಿಯೂ ಸಹ ಬೇಕಾದ ಅಧಿಕಾರಿಗಳಿಗೆ ಬೆಣ್ಣೆ ಬೇಡಾದವರಿಗೆ ಸುಣ್ಣ ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಂದ ರಾಜೀನಾಮೆ ಪಡೆಯಲಿ. ನಿಮ್ಮ ಸೆಲ್ಫಿ, ಕ್ರೆಡಿಟ್ ವಾರ್ ಗೆ 11 ಜನರ ಬಲಿಯಾಗಿದ್ದಾರೆ ಎಂದು ಕಿಡಿಕಾರಿದರು.