ಮೇಘನಾ ಶೆಟ್ಟಿ, ಶಿವಮೊಗ್ಗ
ಟ್ಯೂಷನ್ಗೆ ಹೋಗ್ತೀನಿ ಎಂದು ಸ್ನೇಹಿತರ ಮನೆಗೆ ಹೋಗೋದು, ಸ್ನೇಹಿತನ ಪೆನ್ಸಿಲ್ನ್ನು ತನ್ನದು ಎನ್ನೋದರಿಂದ ಹಿಡಿದು ದುಡ್ಡಿಗಾಗಿ ಸುಳ್ಳು, ಟ್ರಿಪ್ ಹೋಗೋದಕ್ಕೆ ಸುಳ್ಳು ಹೀಗೆ ಮಕ್ಕಳು ದೊಡ್ಡವರಾಗುವವರೆಗೂ ಸಾವಿರಾರು ಸುಳ್ಳುಗಳನ್ನು ಹೇಳುತ್ತಲೇ ಬರುತ್ತಾರೆ.
ಆದರೆ ಯಾಕಿಷ್ಟು ಸುಳ್ಳು ಹೇಳ್ತಾರೆ?
ಭಯ
ಮುಖ್ಯವಾದ ಕಾರಣವೇ ಭಯ, ಮಗು ಕಾಫಿಪುಡಿಯ ಗಾಜಿನ ಡಬ್ಬಿಯನ್ನು ಒಡೆದು ಹಾಕಿದ್ರೆ ನೀವು ಹೇಗೆ ರಿಯಾಕ್ಟ್ ಮಾಡ್ತೀರಿ? ತೆಗೆದು ಒಂದೆರಡು ಬಾರಿಸುತ್ತೀರಿ, ಮುಂದಿನ ಸಲ ಮಕ್ಕಳು ತಪ್ಪು ಮಾಡಿದಾಗ ಅದನ್ನು ಮುಚ್ಚುವ ದಾರಿ ಹುಡುಕುತ್ತಾರೆ. ರಿಲ್ಯಾಕ್ಸ್ ಆಗಿರಿ, ಕಾಫಿ ಪುಡಿ ಡಬ್ಬಿ ಯಾರಿಂದಲಾದರೂ ಬೀಳಬಹುದು, ಅದು ದೊಡ್ಡ ವಿಷಯ ಅಲ್ಲ. ಧೈರ್ಯ ಇರುವ ಮಕ್ಕಳು ಎಲ್ಲ ವಿಷಯಗಳನ್ನು ನಿಮ್ಮ ಜೊತೆ ಮುಕ್ತವಾಗಿ ಚರ್ಚೆ ಮಾಡುತ್ತಾರೆ. ಅದಕ್ಕೆ ನೀವು ಅವಕಾಶ ನೀಡಬೇಕು.
ನಿಮ್ಮ ಲೆಕ್ಷರ್ ಅರ್ಥವಾಗೋದಿಲ್ಲ
ಮಕ್ಕಳಿಗೆ ಉದ್ದುದ್ದನೆಯ ನಿಮ್ಮ ಪಾಠ ಅರ್ಥವಾಗೋದಿಲ್ಲ. ಮಕ್ಕಳಿಗೆ ಅಷ್ಟೊಂದು ಗ್ರಾಸ್ಪಿಂಗ್ ಪವರ್ ಇರುವುದಿಲ್ಲ. ಸಣ್ಣ ವಾಕ್ಯದಲ್ಲಿ ಏನು ಹೇಳಬೇಕೋ ಅದನ್ನು ಹೇಳಿ ಮುಗಿಸಿದರೆ ಸಾಕು ಅದನ್ನು ಬಿಟ್ಟು ಕಥೆ ಕವನ ಅರ್ಥವಾಗೋದಿಲ್ಲ. ಬೋರ್ ಕೂಡ ಆಗುತ್ತಾರೆ. ಇದೆಲ್ಲದಕ್ಕಿಂತ ಸುಳ್ಳು ಹೇಳೋದು ಈಸಿ ಅಂದುಕೊಳ್ತಾರೆ.
ಕಳ್ಳ-ಪೊಲೀಸ್ ಅಲ್ಲ
ಕೆಲವೊಮ್ಮೆ ಪೋಷಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಯಾವುದೋ ಜಾಲದಲ್ಲಿ ಸಿಲುಕಿಕೊಂಡಂತೆ ಫೀಲ್ ಮಾಡುತ್ತಾರೆ. ಕಡೆಗೂ ಬೈಸಿಕೊಳ್ಳಬೇಕು ಎಂದು ಮೊದಲೇ ಸುಳ್ಳು ಹೇಳಿ ಬಿಡುತ್ತಾರೆ. ಮಕ್ಕಳು ಮುಕ್ತವಾಗಿ ಮಾತನಾಡುವ ವಾತಾವರಣ ಮನೆಯಲ್ಲಿರಲಿ.
ಸತ್ಯ ಹೇಳಿದ್ರೂ ಬೈಸ್ಕೊಳದು ತಪ್ಪಲ್ಲ
ನಾನು ಮಿಸ್ ಆಗಿ ಸ್ನೇಹಿತನ ಪೆನ್ ಎತ್ತುಕೊಂಡು ಬಂದಿದ್ದೇನೆ ಎಂದು ಮಗು ನಿಮ್ಮ ಬಳಿ ಆನೆಸ್ಟ್ ಆಗಿ ಹೇಳಿದರೆ ನೀವೇನು ಮಾಡ್ತೀರಿ? ಕದ್ದಿದ್ದೀಯ ಎಂದು ಬೈತೀರಿ, ಅವರು ಕದ್ದಿದ್ದಾರೋ ಅಥವಾ ನಿಜವಾಗಿಯೂ ಬೈ ಮಿಸ್ಟೇಕ್ ಹೀಗೆ ಆಗಿದೆಯೋ ಎಂದು ವಿಚಾರಿಸೋಕೂ ಹೋಗೋದಿಲ್ಲ. ಸತ್ಯ ಹೇಳಿದ್ರೆ ಬೈಸ್ಕೋಬೇಕು ಎಂದು ಮಕ್ಕಳು ಸತ್ಯ ಮುಚ್ಚಿಡ್ತಾರೆ. ಮಕ್ಕಳು ನಿಜ ಹೇಳಿದಾಗ ಅಪ್ರಿಶಿಯೇಟ್ ಮಾಡಿ. ನಿಮ್ಮ ಪ್ರಕಾರ ಅದು ತಪ್ಪಾಗಿದ್ದರೂ ಪರವಾಗಿಲ್ಲ.
ಕಿರುಚಾಟ ಇಷ್ಟ ಇಲ್ಲ
ಮಕ್ಕಳಿಗೆ ನಿಮ್ಮ ಕಿರುಚಾಟ ಇಷ್ಟ ಇಲ್ಲ. ಅಪ್ಪ ಅಮ್ಮ ನನ್ನನ್ನು ಅರ್ಥಮಾಡಿಕೊಳ್ಳೋದಿಲ್ಲ. ಕೂಗುತ್ತಾರೆ ಎಂದು ಮಕ್ಕಳ ಮನಸ್ಸಿನಲ್ಲಿ ದೃಢವಾಗಿ ಕೂರುತ್ತದೆ. ಕೆಲವು ಮಕ್ಕಳಿಗೆ ಪೋಷಕರ ಮನಸ್ಸಿಗೆ ನೋವು ಮಾಡೋದಕ್ಕೆ ಇಷ್ಟ ಇರೋದಿಲ್ಲ. ಅವರಿಗಾಗಿ ಸುಳ್ಳುಹೇಳ್ತಾರೆ. ಕೆಲವು ಪೋಷಕರು ಮಕ್ಕಳ ತಪ್ಪಿಗೆ ಅವರಿಬ್ಬರೇ ಕಿತ್ತಾಡುತ್ತಾರೆ. ಅಪ್ಪ ಅಮ್ಮನ ಮಧ್ಯೆ ಜಗಳ ತರೋದಕ್ಕೆ ಮಕ್ಕಳಿಗೆ ಇಷ್ಟ ಇರೋದಿಲ್ಲ.