ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಗಳ ಕಳಪೆ ಸ್ಥಿತಿಗೆ ಬೇಸರಗೊಂಡ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನಾನು ಒಬ್ಬನೇ ಏಕೆ ಬೈಯಿಸಿಕೊಳ್ಳಬೇಕು? ಎಂದು ಕೇಳಿದ್ದಾರೆ.
ದೆಹಲಿಯಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ (CII) ಆಯೋಜಿಸಿದ್ದ ಸ್ಮಾರ್ಟ್ ರಸ್ತೆಗಳ ಸಮ್ಮೇಳನ 2025 ರಲ್ಲಿ ಮಾತನಾಡಿದ ಗಡ್ಕರಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆದ್ದಾರಿ ನಿರ್ಮಿಸಿದ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳ ಹೆಸರುಗಳು ಹಾಗೂ ಅವರ ಸಂಪರ್ಕ ವಿವರಗಳೊಂದಿಗೆ QR-ಕೋಡ್ ಸೈನ್‌ಬೋರ್ಡ್‌ಗಳನ್ನು ಹಾಕಲಾಗುವುದು. ಇದರಿಂದ ರಸ್ತೆಯ ಸ್ಥಿತಿಗೆ ನಿರ್ದಿಷ್ಟವಾಗಿ ಯಾರು ಜವಾಬ್ದಾರರು ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಶೀಘ್ರವೇ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಾವು ಓಡಾಡುತ್ತಿರುವ ರಸ್ತೆಯನ್ನು ಯಾರು ನಿರ್ಮಿಸಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ. ಇದಕ್ಕಾಗಿ ಹೆದ್ದಾರಿ ಬದಿಯ ಫಲಕಗಳಲ್ಲಿ QR ಕೋಡ್ ಅಳವಡಿಸಲಾಗುತ್ತದೆ. ಪ್ರಯಾಣಿಕರು ಸ್ಕ್ಯಾನ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಸೈನ್‌ಬೋರ್ಡ್ ಜನರಿಗೆ ಸಚಿವರು, ಕಾರ್ಯದರ್ಶಿ ಅಥವಾ ಗುತ್ತಿಗೆದಾರರು ಯಾರು ಮತ್ತು ಅವರ ಫೋನ್ ಸಂಖ್ಯೆಗಳು ಯಾವುವು ಎಂಬುದನ್ನು ತಿಳಿಸುತ್ತದೆ. ಯೋಜನೆಯು ಪೂರ್ಣಗೊಂಡ ನಂತರ 10 ವರ್ಷಗಳ ಕಾಲ ಪ್ರತಿಯೊಬ್ಬ ಗುತ್ತಿಗೆದಾರನು ನಿರ್ವಹಣೆಗೆ ಜವಾಬ್ದಾರನಾಗಿರುತ್ತಾನೆ. ರಸ್ತೆಯಲ್ಲಿ ಗುಂಡಿ ಸೇರಿದಂತೆ ಇತರೆ ದೋಷಗಳಿದ್ರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಜವಾಬ್ದಾರರಾಗಿದ್ದು, ಅವುಗಳನ್ನು ಸರಿಪಡಿಸಬೇಕಾಗುತ್ತದೆ. ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯು ಹೆದ್ದಾರಿ ಯೋಜನೆಗಳನ್ನು ಹೆಚ್ಚು ಪಾರದರ್ಶಕವಾಗಿಸುವುದಲ್ಲದೆ, ನಾಗರಿಕರನ್ನು ಸಬಲೀಕರಣಗೊಳಿಸುತ್ತದೆ ಎಂದರು.
ಹೊಸ ಮಾನದಂಡಗಳ ಅಡಿಯಲ್ಲಿ, ಈ ಫಲಕಗಳಲ್ಲಿ ಆಸ್ಪತ್ರೆ, ಪೊಲೀಸ್ ಠಾಣೆ, ಪೆಟ್ರೋಲ್ ಪಂಪ್‌ಗಳು, ಪಂಕ್ಚರ್ ರಿಪೇರಿ ಅಂಗಡಿಗಳು, ವಾಹನ ಸೇವಾ ಕೇಂದ್ರಗಳು ಮತ್ತು ಇ-ಚಾರ್ಜಿಂಗ್ ಕೇಂದ್ರಗಳು ಸೇರಿದಂತೆ ಸುತ್ತಮುತ್ತಲಿನ ಕನಿಷ್ಠ 20 ಅಗತ್ಯ ಸೇವೆಗಳ ವಿವರಗಳನ್ನು ಮತ್ತು ಸಂಬಂಧಿತ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಲಾಗುತ್ತದೆ. ಅಧಿಕಾರಿಗಳು ಈ ಸೈನ್‌ಬೋರ್ಡ್‌ಗಳನ್ನು ರಸ್ತೆಬದಿ, ಟೋಲ್ ಪ್ಲಾಜಾಗಳು, ಮಿನಿ ವಿಶ್ರಾಂತಿ ಪ್ರದೇಶಗಳು ಮತ್ತು ಟ್ರಕ್ ಲೇ-ಬೈಗಳಲ್ಲಿ ಸ್ಥಾಪಿಸಲು ಅಧಿಕಾರ ನೀಡಿದ್ದಾರೆ.
ರಸ್ತೆ ಗುಂಡಿಗಳಿದ್ರೆ ಮಾಧ್ಯಮವರು ನನ್ನ ಫೋಟೋ ಮಾತ್ರ ಯಾಕೆ ಹಾಕಬೇಕು? ಗುತ್ತಿಗೆದಾರರ ಫೋಟೋ ಸಹ ಹಾಕಲಿ. ಸೆಕ್ರೆಟರಿ, ಅಧಿಕಾರಿಗಳ ಫೋಟೋ ಬರಲಿ. ಎಲ್ಲವೂ ನನ್ನ ಕುತ್ತಿಗೆಗೆ ಯಾಕೆ ಬರುತ್ತೆ. ಸೋಶಿಯಲ್ ಮೀಡಿಯಾದಲ್ಲಿ ನಾನೇಕೆ ಎಲ್ಲದಕ್ಕೂ ಉತ್ತರ ನೀಡಲಿ ಎಂದು ಹೇಳಿ ನಿತಿನ್ ಗಡ್ಕರಿ ಹೇಳಿದರು.

