ಹೊಸದಿಗಂತ ಶಿವಮೊಗ್ಗ :
ರಾಜ್ಯದ ಮುಖ್ಯಮಂತ್ರಿಗಳಿಗೆ ರೈತರ ಮೇಲೆ ದ್ವೇಷ ಮತ್ತು ತಾತ್ಸಾರ ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಬಿಜೆಪಿ ಜಿಲ್ಲಾ ರೈತಮೋರ್ಚಾದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ರೈತರು ಕಂಗಾಲಾಗಿದ್ದಾರೆ. ನಾಡಿಗೆ ತುತ್ತು ಅನ್ನ ಕೊಡುವವರ ಬಗ್ಗೆ ಸರ್ಕಾರ ತಾತ್ಸಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಉದ್ದುದ್ದ ಭಾಷಣ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತಾರೆ. ಇವರದೇ ಹಿಂದಿನ ಅಧಿಕಾರಾವಧಿಯಲ್ಲಿ 4283 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಾರಿ ಎರಡೂವರೆ ವರ್ಷದಲ್ಲಿ 980 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಗಾರು ಚೆನ್ನಾಗಿದ್ದರೂ ಕೇಂದ್ರ ನೀಡಿದ 8 ಲಕ್ಷ 23 ಸಾವಿರ ಮೆಟ್ರಿಕ್ಟನ್ ರಸಗೊಬ್ಬರವನ್ನು ರೈತರಿಗೆ ವಿತರಿಸಲು ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ನೀಡಿದ್ದರೂ ರಾಜ್ಯದ ಬೇಜವಾಬ್ದಾರಿತನದಿಂದ ರೈತರು ಗೊಬ್ಬರ ಸಿಗದೇ ಬೀದಿಗಿಳಿದಿದ್ದಾರೆ. ರೈತರ ಬಾಳನ್ನು ನಾಶಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು.