ಭಾರತದ ಪ್ರತಿಯೊಂದು ಬೀದಿಯಲ್ಲೂ, ಬೆಳಗ್ಗಿನ ಸಮಯದಲ್ಲಿ ಸಿಗುವ ಒಂದು ಕಪ್ ಚಹಾ ಎಲ್ಲರಿಗೂ ಹೊಸ ಶಕ್ತಿಯ ಪ್ರಾರಂಭವಾಗುತ್ತದೆ. ಆದರೆ ಈ ಚಹಾ ಸಂಸ್ಕೃತಿ ಭಾರತದ್ದೆ ಎಂದು ಭಾವಿಸಿದರೆ ಅದು ತಪ್ಪು. ನಾವು ಇಂದಿನಂತೆಯೇ ಪ್ರೀತಿಯಿಂದ ಕುಡಿಯುವ ಹಾಲು-ಸಕ್ಕರೆ ಸೇರಿಸಿದ ಚಹಾದ ಕಥೆ ವಾಸ್ತವವಾಗಿ ಬ್ರಿಟಿಷರ ಕಾಲದಿಂದ ಆರಂಭವಾಗಿದೆ. 19ನೇ ಶತಮಾನದಲ್ಲಿ ಬ್ರಿಟಿಷರು ಚೀನಾದ ಚಹಾ ವ್ಯಾಪಾರಕ್ಕೆ ಭಾರತಕ್ಕೆ ಬಂದು ಚಹಾ ಕೃಷಿಯನ್ನು ಪ್ರಾರಂಭಿಸಿದಾಗ ಈ ಪಾನೀಯ ದೇಶದ ಜೀವನಶೈಲಿಯ ಭಾಗವಾಯಿತು.

ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಚಹಾ ವ್ಯವಹಾರವನ್ನು ಸ್ಥಾಪಿಸಿತು. 1900ರ ದಶಕದ ಆರಂಭದಲ್ಲಿ ಚಹಾವನ್ನು ಹೆಚ್ಚು ಜನಪ್ರಿಯಗೊಳಿಸಲು ಬ್ರಿಟಿಷರು ಭಾರತೀಯರಿಗೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಲು ಸಲಹೆ ನೀಡಿದರು. ಆರಂಭದಲ್ಲಿ ಇದು ಕೇವಲ ರಫ್ತು ಮತ್ತು ಗಣ್ಯರ ಪಾನೀಯವಾಗಿದ್ದರೂ, ಕ್ರಮೇಣ ಭಾರತೀಯ ಮನೆಗಳಲ್ಲಿ ಹಾಲು, ಸಕ್ಕರೆ ಮತ್ತು ಮಸಾಲೆಗಳೊಂದಿಗೆ ಚಹಾ ತಯಾರಿಕೆಯಾಗತೊಡಗಿತು. ಈ ಪ್ರಯೋಗವೇ ಇಂದು ವಿಶ್ವವಿಖ್ಯಾತ “ಮಸಾಲಾ ಚಾಯ್”ಗೆ ದಾರಿ ಮಾಡಿತು.

ಬ್ರಿಟನ್‌ನಲ್ಲಿ ಹಾಲಿನ ಚಹಾ ಸಂಪ್ರದಾಯ 17ನೇ ಶತಮಾನದಿಂದಲೂ ಇತ್ತು. ಕಪ್ ಒಡೆಯದಂತೆ ತಡೆಯಲು ಬಿಸಿ ಟೀಗೆ ಹಾಲು ಸೇರಿಸುವುದು ಪ್ರಾರಂಭದ ಉದ್ದೇಶವಾಗಿದ್ದರೂ, ನಂತರ ಅದು ಅವರ ಜೀವನದ ಅಂಗವಾಯಿತು.

ಪೂರ್ವ ಏಷ್ಯಾದ ತೈವಾನ್‌ನಲ್ಲಿ “ಬಬಲ್ ಟೀ”, ಥೈಲ್ಯಾಂಡ್‌ನಲ್ಲಿ ಕಿತ್ತಳೆ ಬಣ್ಣದ “ಥಾಯ್ ಟೀ”, ಮಲೇಷ್ಯಾ ಹಾಗೂ ಸಿಂಗಾಪುರದಲ್ಲಿ “ತೆಹ್ ತಾರಿಕ್” ಎಂಬಂತೆ ಚಹಾದ ವಿಭಿನ್ನ ರೂಪಗಳು ಕಾಣುತ್ತವೆ. ಚೀನಾ ಮತ್ತು ಜಪಾನ್‌ಗಳಲ್ಲಿ ಚಹಾವನ್ನು ಕಲೆಯಂತೆ ಪರಿಗಣಿಸಿ ಹಾಲಿಲ್ಲದೆ ಹಸಿರು ಅಥವಾ ಕಪ್ಪು ಚಹಾವನ್ನು ಕುಡಿಯುತ್ತಾರೆ. ಟರ್ಕಿಯವರೂ ಕಪ್ಪು ಚಹಾವನ್ನು ಹಾಲಿಲ್ಲದೆ ಸಣ್ಣ ಲೋಟಗಳಲ್ಲಿ ಕುಡಿಯುತ್ತಾರೆ.

ಈ ಎಲ್ಲ ಸಂಪ್ರದಾಯಗಳು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತವೆ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಸಂಸ್ಕೃತಿ. ಬ್ರಿಟಿಷರು ಭಾರತಕ್ಕೆ ತಂದ ಚಹಾ ಇಂದು ಭಾರತೀಯರ ರುಚಿ, ಪರಂಪರೆ ಮತ್ತು ಆತ್ಮೀಯತೆಯ ಸಂಕೇತವಾಗಿದೆ. ಹೀಗಾಗಿ, ಪ್ರತಿ ಬಾರಿ ನಾವು ಚಹಾ ಕುಡಿಯುವಾಗ ಅದು ಕೇವಲ ಸಿಪ್ ಅಲ್ಲ ಅದು ಇತಿಹಾಸದ ಮತ್ತು ಸಂಸ್ಕೃತಿಯ ಸಿಹಿ ಅನುಭವ ಎನ್ನಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

