ನಮಗೆ ಕಡಿಮೆ ಅವರಿಗೆ ಹೆಚ್ಚು ಸಂಭಾವನೆ ಏಕೆ?: ಸಿನಿಮಾದಲ್ಲಿನ ತಾರತಮ್ಯ ಕುರಿತು ನಟಿ ರಮ್ಯಾ ಬೇಸರ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಚಿತ್ರರಂಗದಲ್ಲಿ ವೇತನ ಅಸಮಾನತೆ ಬಗ್ಗೆ ಮಾತನಾಡಿದ್ದಾರೆ.

ನನ್ನೊಟ್ಟಿಗೆ ನಟನೆ ಮಾಡಿದ ಕೆಲವರು ಇವತ್ತು ಸೂಪರ್ ಸ್ಟಾರ್​ಗಳಾಗಿದ್ದಾರೆ. ನನ್ನ ಜೊತೆಗೆ ಆರಂಭದಲ್ಲಿ ಸಿನಿಮಾ ಮಾಡುವಾಗ, ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಆ ಒಂದು ಸಿನಿಮಾ ಹಿಟ್ ಆದ ಕೂಡಲೇ ಮುಂದಿನ ಸಿನಿಮಾಕ್ಕೆ ನನಗಿಂತ 5ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು, ಅವರಿಗೆ 5 ಕೋಟಿ ನಟನ ಸಂಭಾವನೆ ಇದ್ದರೆ ನನಗೆ 1ಕೋಟಿ ಇರುತ್ತಿತ್ತು. ಅವರಷ್ಟೆ ಕೆಲಸ ನಾವೂ ಮಾಡುವಾಗ ನಮಗೆ ಕಡಿಮೆ ಸಂಭಾವನೆ ಅವರಿಗೆ ಹೆಚ್ಚು ಸಂಭಾವನೆ ಏಕೆ? ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟಿ ರಮ್ಯಾ, ‘ಕನ್ನಡದಲ್ಲಿ ಹೇಳಬೇಕಾದ ಕತೆಗಳು ಸಾಕಷ್ಟಿವೆ ಆದರೆ ಯಾರೂ ಹೇಳುವ ಧೈರ್ಯ ಮಾಡುತ್ತಿಲ್ಲ. ಈಗಲೂ ನಾವು ಮಹಿಳಾ ಪ್ರಧಾನ ಸಿನಿಮಾ ಎಂದರೆ ಮಹಿಳೆಯರು ಪೊಲೀಸ್ ಡ್ರೆಸ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವ ಸಿನಿಮಾಗಳನ್ನೇ ಮಾಡುತ್ತಿದ್ದೇವೆ. ಇದು ಮಹಿಳಾ ಪ್ರಧಾನ ಸಿನಿಮಾ ಎನಿಸಿಕೊಳ್ಳುವುದಿಲ್ಲ. ಮಲಯಾಳಂ ಸಿನಿಮಾಗಳು ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡುತ್ತಿವೆ. ಕನ್ನಡದಲ್ಲಿ ಇತ್ತೀಚೆಗೆ ನನಗೆ ಇಷ್ಟವಾದ ಸಿನಿಮಾಗಳೆಂದರೆ ‘ಗಂಟುಮೂಟೆ’, ‘ಹದಿನೇಳೆಂಟು’, ‘ಸಪ್ತಸಾಗರದಾಚೆ ಎಲ್ಲೊ’ ಮತ್ತು ‘ಆಚಾರ್ಯ ಅಂಡ್ ಕೋ ’ ಎಂದಿದ್ದಾರೆ ರಮ್ಯಾ.

ಈಗಿನ ಕಾಲಘಟ್ಟದಲ್ಲಿ ನಟಿಯರು ಯಾಕೆ ಜನರ ಮನಸಲ್ಲಿ ಉಳಿಯುತ್ತಿಲ್ಲ..? ಅನ್ನೋ ಪ್ರಶ್ನೆಗೆ ಉತ್ತರಿಸಿದ ರಮ್ಯಾ, ‘ತ್ರಿಷಾ, ನಯನತಾರಾ ಹಾಗೆ ಜನಪ್ರಿಯ ನಟಿ ಇವತ್ತು ಇಲ್ಲ ಅದಕ್ಕೆ ಕಾರಣ ಸಿನಿಮಾ ಆಯ್ಕೆ, ಕಥೆ, ಪಾತ್ರ, ಜನರೇಶನ್ ಚೇಂಜ್ ಆಗಿದೆ, ಅದಕ್ಕೆ ತಕ್ಕಂತೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!