March 17, 2026
Tuesday, March 17, 2026
spot_img

ಕನ್ನಡವಿಲ್ಲದ ಪರೀಕ್ಷೆ ನಮಗ್ಯಾಕೆ? ಕನ್ನಡಿಗರ ಕೆಚ್ಚೆದೆಯ ಹೋರಾಟಕ್ಕೆ ಮಣಿದ ನೈರುತ್ಯ ರೈಲ್ವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವ ನೈರುತ್ಯ ರೈಲ್ವೆ ಇಲಾಖೆಯ ನಡೆಯ ವಿರುದ್ಧ ರಾಜ್ಯಾದ್ಯಂತ ಆಕ್ರೋಶದ ಕಟ್ಟೆ ಒಡೆದಿದೆ. ಕನ್ನಡಪರ ಸಂಘಟನೆಗಳ ತೀವ್ರ ಪ್ರತಿಭಟನೆ ಮತ್ತು ಕನ್ನಡಿಗರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ನಡೆದ ಹೋರಾಟಕ್ಕೆ ಮಣಿದಿರುವ ರೈಲ್ವೆ ಇಲಾಖೆ, ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ದಿಢೀರ್ ಮುಂದೂಡಿದೆ.

ನೈರುತ್ಯ ರೈಲ್ವೆಯ 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದ 101 ಎಲ್‌ಡಿಸಿಇ ಮುಂಬಡ್ತಿ ಹುದ್ದೆಗಳಿಗಾಗಿ ಇಂದು ಪರೀಕ್ಷೆ ನಿಗದಿಯಾಗಿತ್ತು. ಆದರೆ ಈ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಉತ್ತರಿಸಲು ಅವಕಾಶ ನೀಡದಿರುವುದು ಕನ್ನಡಿಗ ಉದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕಚೇರಿಗೆ ವಿವಿಧ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಇಲಾಖೆ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ.

ಈ ಬೆಳವಣಿಗೆಯ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈಲ್ವೆ ಇಲಾಖೆಯ ಮಲತಾಯಿ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ.

“ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ಕನ್ನಡಿಗರ ಶಾಂತಿಯುತ ಮನವಿಯನ್ನು ರೈಲ್ವೆ ಇಲಾಖೆ ಮೊದಲೇ ಆಲಿಸಬೇಕಿತ್ತು. ಅದನ್ನು ನಿರ್ಲಕ್ಷಿಸಿ, ಕೊನೆ ಕ್ಷಣದಲ್ಲಿ ಪರೀಕ್ಷೆ ರದ್ದು ಮಾಡಿರುವುದು ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದೆ. ಇದು ಕನ್ನಡಿಗರ ಮೇಲಿನ ತಾತ್ಸಾರ ಭಾವನೆಯನ್ನು ತೋರಿಸುತ್ತದೆ,” ಎಂದು ಸಿಎಂ ಕಿಡಿಕಾರಿದ್ದಾರೆ.

ರೈಲ್ವೆ ಇಲಾಖೆಯ ಈ ಗೊಂದಲದ ನಿರ್ಧಾರದಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಮತ್ತು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಪರೀಕ್ಷೆ ರದ್ದಾಗಿರುವುದರಿಂದ ಈಗ ಸಾವಿರಾರು ಅಭ್ಯರ್ಥಿಗಳು ಅತಂತ್ರರಾಗಿದ್ದು, ರೈಲ್ವೆ ಇಲಾಖೆಯು ಮುಂದಿನ ದಿನಾಂಕದಂದು ಕನ್ನಡ ಭಾಷೆಯನ್ನೂ ಸೇರಿಸಿ ಪರೀಕ್ಷೆ ನಡೆಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !