ಹೊಸದಿಗಂತ ತುಮಕೂರು:
ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ ಮಾನವೀಯತೆ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಹೊಸದಾಗಿ ಮದುವೆಯಾಗಿ ದೇವಸ್ಥಾನಕ್ಕೆ ಹರಕೆ ತೀರಿಸಲು ಬಂದ ದಲಿತ ನವದಂಪತಿಯನ್ನು ಮೈಮೇಲೆ ದೇವರು ಬಂದಂತೆ ನಾಟಕವಾಡಿ ಹೊರದಬ್ಬಿದ ಘಟನೆ ವರದಿಯಾಗಿದೆ.
ಗೋಣಿ ತುಮಕೂರಿನ ಅರಸಮ್ಮ ದೇವಾಲಯಕ್ಕೆ ದಲಿತ ಸಮುದಾಯದ ಜಗದೀಶ್ ಮತ್ತು ಅವರ ಪತ್ನಿ ಪೂಜೆ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಅಲ್ಲಿನ ನಿವಾಸಿ ನಾರಾಯಣಪ್ಪ ಎಂಬಾತ, ದಂಪತಿಯನ್ನು ತಡೆಯಲು ದೇವರ ಹೆಸರನ್ನು ಬಳಸಿಕೊಂಡಿದ್ದಾನೆ. ಮೈಮೇಲೆ ದೇವರು ಬಂದಂತೆ ವರ್ತಿಸಿದ ಆತ, “ನೀವು ದಲಿತರು, ನಿಮಗೆ ಒಳಗೆ ಪ್ರವೇಶವಿಲ್ಲ, ಹೊರಗೆ ನಡಿಯಿರಿ” ಎಂದು ದರ್ಪ ತೋರಿದ್ದಾನೆ. ಅಷ್ಟೇ ಅಲ್ಲದೆ, ನಿಮ್ಮ ಪ್ರವೇಶದಿಂದ ದೇವಸ್ಥಾನ ಅಪವಿತ್ರವಾಗಿದ್ದು, ಪುಣ್ಯಾಹ ಮಾಡಿಸಬೇಕೆಂದು ಹೇಳಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಾನೆ.
ಈ ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೊಂದ ದಂಪತಿ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೇವರು ಬಂದಂತೆ ನಾಟಕವಾಡಿದ್ದ ಪ್ರಮುಖ ಆರೋಪಿ ನಾರಾಯಣಪ್ಪನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ನಾರಾಯಣಪ್ಪ ಸೇರಿದಂತೆ ಪ್ರಭಾ, ಕಾಂತಣ್ಣ, ಅಮೂಲ್ಯ, ಪುಟ್ಟೇಗೌಡ ಹಾಗೂ ಪದ್ಮ ಎಂಬುವವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.



