ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಾಲ್ಕು ವರ್ಷಗಳ ಆಡಳಿತದಲ್ಲಿ ಸಂಭವಿಸಿರುವ ಲಾಕಪ್ ಡೆತ್ ವಿರುದ್ಧ ಟಿವಿಕೆ ಸಂಸ್ಥಾಪಕ ಮತ್ತು ನಟ ವಿಜಯ್ ಭಾನುವಾರ ಪ್ರತಿಭಟನೆ ನಡೆಸಿದ್ದಾರೆ.
ಶಿವಗಂಗಾ ಜಿಲ್ಲೆಯ ಮಡಪ್ಪುರಂನಲ್ಲಿ ದೇವಾಲಯದ ಭದ್ರತಾ ಸಿಬ್ಬಂದಿ ಅಜಿತ್‌ಕುಮಾರ್ ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದ ಸಿಎಂ ನಡೆಯನ್ನು ಟೀಕಿಸಿದ ವಿಜಯ್, ಕೇಂದ್ರ ಸರ್ಕಾರದ ಹಿಂದೆ ಸ್ಟಾಲಿನ್ ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಬಿಐ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕೈಗೊಂಬೆಯಾಗಿ ಮುಂದುವರೆದಿದೆ. ಅಜಿತ್‌ಕುಮಾರ್ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸುವ ಮೂಲಕ ನೀವೇಕೆ ಅವರ ಹಿಂದೆ ಅಡಗಿಕೊಂಡಿದ್ದೀರಿ?ಎಂದು ಪ್ರಶ್ನಿಸಿದ್ದಾರೆ.
ಅಜಿತ್‌ಕುಮಾರ್ ಕುಟುಂಬಕ್ಕೆ ‘ಕ್ಷಮಿಸಿ’ ಎಂದು ಕೇಳಿದ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡ ವಿಜಯ್, ‘ನೀವು ಅಜಿತ್‌ಕುಮಾರ್ ಕುಟುಂಬಕ್ಕೆ ಸಾರಿ ಕೇಳಿದ್ದೀರಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ನಿಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಪೊಲೀಸ್ ಕಸ್ಟಡಿಯಲ್ಲಿ 24 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ಕುಟುಂಬಗಳಿಗೆ ‘ಕ್ಷಮಿಸಿ’ ಎಂದು ಹೇಳಿದ್ದೀರಾ? ಅವರಿಗೆ ಪರಿಹಾರ ನೀಡಿದ್ದೀರಾ? ಎಂದು ಟೀಕಾ ಪ್ರಹಾರ ನಡೆಸಿದರು.
ಎಲ್ಲಾ ದೌರ್ಜನ್ಯಗಳನ್ನು ನ್ಯಾಯಾಲವೇ ಪ್ರಶ್ನಿಸಬೇಕಾದರೆ ನೀವೇಕೆ ವ್ಯವಹಾರದ ಚುಕ್ಕಾಣಿ ಹಿಡಿದಿದ್ದೀರಿ? ಸಿಎಂ ಹುದ್ದೆಯನ್ನು ಏಕೆ ಹೊಂದಿದ್ದೀರಿ ಎಂದು ಪ್ರಶ್ನಿಸಿದ ವಿಜಯ್, ಅನೇಕ ಪ್ರಶ್ನೆಗಳಿದ್ದರೂ ಸಿಎಂ ಅವರಿಂದ ಯಾವುದೇ ಉತ್ತರ ಸಿಗುತ್ತಿಲ್ಲ. ನಿಮ್ಮಿಂದ ನಾವು ನಿರೀಕ್ಷಿಸಬಹುದಾದ ಅಂತಿಮ ಉತ್ತರವೆಂದರೆ ‘ಕ್ಷಮಿಸಿ ಮಾ!’.ಒಂದು ಅಹಿತಕರ ಘಟನೆ ಸಂಭವಿಸಿದೆ. ಅಷ್ಟೇ ಅಂತಾ ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಗುಡುಗಿದರು.
ವೇದಿಕೆಯಲ್ಲಿದ್ದ ವಿಜಯ್, ಲಾಕಪ್ ಡೆತ್ ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿಯಾದರು. ಮರೀನಾ ಬೀಚ್ ಬಳಿಯ ಶಿವಾನಂದ ಸಾಲೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಟಿವಿಕೆಯ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡರು.