ಹೊಸ ದಿಗಂತ ವರದಿ,ಚಿತ್ರದುರ್ಗ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಬಿಜೆಪಿ ಹಗರಣಗಳ ತನಿಖೆ ಬಗ್ಗೆ ಇಲ್ಲಿವರೆಗೆ ಏಕೆ ಸರ್ಕಾರ ಸುಮ್ಮನಿತ್ತು ಎಂದು ಕೇಂದ್ರ ಸರ್ಕಾರದ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.
ನಗರದ ಹೊರವಲಯದಲ್ಲಿರುವ ಬೋವಿ ಗುರುಪೀಠದಲ್ಲಿ ಶನಿವಾರ ನಡೆದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ೨೫ನೇ ವರ್ಷದ ದೀಕ್ಷಾ ಕಾರ್ಯಕ್ರಮದ ರಜತ ಮಹೋತ್ಸವಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಸುಮ್ಮನೆ ಇತ್ತು. ಈಗ ಕಾಂಗ್ರೆಸ್ ಸಚಿವರ ಹಗರಣ ಬಯಲಿಗೆ ಬರುತ್ತಿದ್ದಂತೆ ಹಿಂದಿನ ಸರ್ಕಾರಗಳ ಹಗರಣಗಳ ತನಿಖೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಹುನ್ನಾರ ಎಂದು ವಾಗ್ದಾಳಿ ನಡೆಸಿದರು.
ಇದುವರೆಗೂ ನಾಗೇಂದ್ರ, ದದ್ದಲ್ ವಿರುದ್ಧ ಎಫ್‌ಐಆರ್ ಆಗಿಲ್ಲ. ವಾಲ್ಮೀಕಿ ಅಭಿವೃದ್ಧೀ ನಿಗಮದ ನೌಕರ ಚಂದ್ರಶೇಖರ್ ಡೆತ್ ನೋಟ್‌ನಲ್ಲಿ ಎಲ್ಲಾ ಉಲ್ಲೇಖ ಇದೆ. ಸಚಿವರ ಮೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಆಗಿದೆ ಅಂತ ಬರೆದಿದ್ದಾರೆ. ಇದಕ್ಕಿಂತ ಸಾಕ್ಷಿ ಮತ್ತೇನು ಬೇಕು ಎಂದರು.
ಬಳ್ಳಾರಿ, ತೆಲಂಗಾಣ ಎಲೆಕ್ಷನ್‌ನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಖರ್ಚು ಮಾಡಲಾಗಿದೆ. ಬಡವರ ಅಭಿವೃದ್ಧಿಗೆ ಬಳಸಬೇಕಿದ್ದ ಹಣವನ್ನು ತಮ್ಮ ಪಕ್ಷದ ಚುನಾವಣೆಗೆ ಬಳಸಿಕೊಂಡಿರುವುದು ನಾಚಿಗೇಡಿನ ಸಂಗತಿ. ಇದನ್ನು ದಪ್ಪ ಚರ್ಮದ, ಲಜ್ಜೆಗೇಡಿತನದ ಸರ್ಕಾರ ಎಂದು ಹೇಳಬೇಕು ಎಂದು ಕಿಡಿಕಾರಿದರು.
ಸಿಎಂ ಮುಡಾ ಹಗರಣ ಸಿಬಿಐಗೆ ಯಾಕೆ ಕೊಡ್ಬೇಕು ಅಂತಾರೆ. ೨೦೧೩ರ ಆಫೀಡವಿಟ್‌ನಲ್ಲಿ ಈ ಅಸ್ತಿ ಬಗ್ಗೆ ತೋರಿಸಿಲ್ಲ. ಆಮೇಲೆ ೨೫ ಲಕ್ಷ ಇದ್ದಿದ್ದು ೨೫ ಕೋಟಿ ಆಸ್ತಿ ತೋರಿಸಿದ್ದಾರೆ. ಅದು ಹೇಗೆ ಬಂತು? ಈ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಜಿಲ್ಲೆಯ ಹೆಸರು ಮರುನಾಮಕರಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ರಾಮನ ಹೆಸರು ಕಂಡರೆ ಅಲರ್ಜಿ. ರಾಮನ ವಿಷಯ ಬಂದಾಗ ಅಲರ್ಜಿ ಆಗುತ್ತೆ. ಅದಕ್ಕೆ ಈ ರೀತಿಯಾದ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದಕ್ಕೆ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದರು.