ಮೇಕಪ್, ಫೋಟೋಶೂಟ್, ದೊಡ್ಡ ಆಡಂಬರದ ಮದುವೆಗಳ ನಡುವೆಯೂ ಕೆಲ ಶಾಸ್ತ್ರಗಳು ಬದಲಾಗದೆ ಉಳಿದಿವೆ. ಹಳೆಯ ಪದ್ಧತಿಗಳಂತೆ ನಿರ್ವಹಿಸಲಾಗುತ್ತಿರುವ ವಿಶಿಷ್ಟ ಶಾಸ್ತ್ರವೆಂದರೆ ಮದುವೆಗೂ ಮೊದಲು ವಧು-ವರರಿಗೆ ಅರಿಶಿಣ ಹಚ್ಚುವ ಆಚರಣೆ — ‘ಹಲ್ದಿ ಸೆರೆಮನಿ’. ಕೆಲವರಿಗೆ ಇದು ಕೇವಲ ಚರ್ಮದ ಹೊಳಪಿಗಾಗಿ ಅಥವಾ ಫೋಟೋ ತಗೋಳೋ ಕಾರ್ಯಕ್ರಮವಂತೆ ಕಂಡರೂ, ಇದರ ಹಿಂದೆ ಭಿನ್ನವಾದ ಆಧ್ಯಾತ್ಮಿಕ, ಆರೋಗ್ಯಪೂರ್ಣ ಹಾಗೂ ಭಾವನಾತ್ಮಕ ಅರ್ಥವಿದೆ.
ದೇಹ ಶುದ್ಧೀಕರಣ
ಭಾರತೀಯ ಸಂಸ್ಕೃತಿಯಲ್ಲಿ ಅರಿಶಿಣವನ್ನು ಶುದ್ಧೀಕರಣ ಮತ್ತು ರಕ್ಷಣೆಯ ಸಂಕೇತವಾಗಿ ಪರಿಗಣಿಸಲಾಗಿದೆ. ಅಥರ್ವ ವೇದ ಮತ್ತು ಆಯುರ್ವೇದಗಳಲ್ಲಿ ಅರಿಶಿಣ (ಹರಿದ್ರಾ)ದ ಪರಮ ಗೌರವದ ಬಣ್ಣ ನೀಡಲಾಗಿದೆ. ಮದುವೆಗೂ ಮೊದಲು ವಧು ಮತ್ತು ವರರು ಅರಿಶಿಣ ಸ್ನಾನ ಮಾಡುವ ಸಂಪ್ರದಾಯದ ಮೂಲಕ ಹಳೆಯದನ್ನು ತ್ಯಜಿಸಿ, ಹೊಸ ಅಧ್ಯಾಯಕ್ಕೆ ಶುಭಾರಂಭ ಮಾಡಲು ಮಾನಸಿಕ ಮತ್ತು ದೈಹಿಕ ಶುದ್ಧತೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಭಾವನಾತ್ಮಕ ಬಾಂಧವ್ಯಕ್ಕೆ ಪ್ರತಿರೂಪ
ಅರಿಶಿಣ ಹಚ್ಚುವ ಪ್ರಕ್ರಿಯೆಯಲ್ಲಿ ಕುಟುಂಬದ ಸದಸ್ಯರು, ಸ್ನೇಹಿತರು ಬಂದು ತಮ್ಮ ಕೈಯಿಂದ ಹಚ್ಚುತ್ತಾರೆ. ಈ ಸ್ಪರ್ಶಗಳು ಕೇವಲ ಶಾಸ್ತ್ರವಷ್ಟೇ ಅಲ್ಲ, ಆಶೀರ್ವಾದಗಳ ರೂಪವಾಗಿದೆ. ಇವರು ಪ್ರತಿಯೊಬ್ಬರೂ ‘ನೀವು ಒಂಟಿಯಾಗಿಲ್ಲ’, ‘ನಾವು ನಿಮ್ಮ ಜೊತೆಗೆ ಇರುತ್ತೇವೆ’ ಎಂಬ ಸಂದೇಶವನ್ನು ತಮ್ಮ ಪ್ರೀತಿಯ ಮೂಲಕ ವರ್ಗಾಯಿಸುತ್ತಾರೆ.
ಆಡಂಬರದ ಜಗತ್ತಿನಲ್ಲಿ ಸಂಸ್ಕೃತಿಯ ನೆನಪಿಗಾಗಿ
ಸಾಮಾನ್ಯವಾಗಿ ಮದುವೆಗಳನ್ನು ಭವ್ಯವಾಗಿ ಮಾಡಲಾಗುತ್ತಿದೆ. ಆದರೆ ಹಲ್ದಿ ಶಾಸ್ತ್ರದ ವಿಶೇಷತೆ ಅದು ಸರಳತೆಯ ಆಚರಣೆ. ನೆಲದಲ್ಲಿ ಸಾಮಾನ್ಯ ಬಟ್ಟೆಯಲ್ಲಿ ಕುಳಿತು ಹಳದಿ ಶಾಸ್ತ್ರ ಮಾಡಿಕೊಳ್ಳುವುದು ಸರಳತೆಯನ್ನು ಸಂಕೇತಿಸುತ್ತದೆ. ಯಾವುದೇ ಆಭರಣ, ಆಡಂಬರಗಳಿಲ್ಲದೆ ನಡೆಯುತ್ತದೆ. ಈ ಕಾರ್ಯಕ್ರಮ ಮೂಲ ಸಂಸ್ಕೃತಿಯ ಶುದ್ಧತೆಯನ್ನು ತೋರಿಸುತ್ತದೆ. ಇದು “ನೀವು ಎಲ್ಲಿ ನಿಂತಿದ್ದೀರಿ, ಅಲ್ಲಿಂದಲೇ ಬೆಳೆಯಬೇಕು” ಎಂಬ ಸಂಸ್ಕಾರವನ್ನು ನೆನಪಿಸುತ್ತದೆ.
ಅಂತರಂಗದ ಹೆಣ್ತನದ ಮೆಲುಕು
ಅರಿಶಿಣ ಶಾಸ್ತ್ರವನ್ನು ಕೆಲವರು ವಧುವನ್ನು ‘ಬ್ಯೂಟಿಫೈ’ ಮಾಡಲು ಎಂಬ ನೋಟದಿಂದ ನೋಡುವರು. ಆದರೆ, ಈ ಆಚರಣೆಯ ಮೂಲ ಉದ್ದೇಶ ವಧುವಿನಲ್ಲಿ ಆತ್ಮವಿಶ್ವಾಸ ಮೂಡಿಸುವುದು. ಅವಳಲ್ಲಿ ಹೆಣ್ಣಾದ ಹೆಮ್ಮೆ, ನಾಚಿಕೆಯ ಸಂಕೋಚವಿಲ್ಲದ ಹೆಜ್ಜೆ, ಹೊಸ ಬಾಳಿಗೆ ಧೈರ್ಯವನ್ನು ತುಂಬುವ ಒಂದು ಆಧ್ಯಾತ್ಮಿಕ ತಯಾರಿ — ಇದು ‘ಹೆಣ್ತನದ ಜಾಗೃತಿ’ಗೆ ಸಮಾನವಾದ ಶಾಸ್ತ್ರ.
ಅರಿಶಿಣ ಹಚ್ಚುವ ಸಂಪ್ರದಾಯ ಪುರಾತನವಾದರೂ ಅದರ ನಂಬಿಕೆಗಳು ಮತ್ತು ಉದ್ದೇಶಗಳು ಇಂದಿಗೂ ಪರಿಣಾಮಕಾರಿಯಾಗಿವೆ. ಮದುವೆ ಎಂಬ ಹೊಸ ಪ್ರಾರಂಭಕ್ಕೆ ಇದು ದೈಹಿಕ ಶುದ್ಧತೆ, ಮನಃಶಾಂತಿ ಹಾಗೂ ಬಂಧುಗಳ ಆಶೀರ್ವಾದಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ವಿಶಿಷ್ಟ ಶಾಸ್ತ್ರವಾಗಿ ಉಳಿದಿದೆ.