ಹಾಲು ಆರೋಗ್ಯಕರ ಆಹಾರಗಳಲ್ಲಿ ಪ್ರಮುಖವಾಗಿದ್ದು, ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ವೈದ್ಯರು ಪ್ರತಿದಿನ ಕನಿಷ್ಠ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಮಾಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ಹಾಲು ಕೇವಲ ಶೀತಪಾನವಲ್ಲ, ಇದು ಸಂಪೂರ್ಣ ಪೋಷಕಾಂಶಗಳಿಂದ ತುಂಬಿರುತ್ತದೆ.
ಹಾಲಿನಲ್ಲಿ 8 ಗ್ರಾಂ ಪ್ರೋಟೀನ್, 300 ಮಿಲಿಗ್ರಾಂ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಡಿ, ವಿಟಮಿನ್ ಎ ಮುಂತಾದ ಅನೇಕ ಪೋಷಕಾಂಶಗಳಿವೆ. ಇದರಲ್ಲಿನ ವಿಟಮಿನ್ ಡಿ ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ, ವಿಟಮಿನ್ ಎ ಕಣ್ಣುಗಳ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ದೇಹದ ರೋಗಪ್ರತಿರೋಧ ಶಕ್ತಿಯನ್ನು ಬಲಪಡಿಸುತ್ತದೆ.
ವ್ಯಾಯಾಮದ ನಂತರ ಹಾಲು ಕುಡಿಯುವುದು ದೇಹದ ಸ್ನಾಯುಗಳನ್ನು ಬಲಪಡಿಸಲು ಹಾಗೂ ಕೊಬ್ಬನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಕೆನೆಭರಿತ ಹಾಲು ಹೆಚ್ಚು ಕೊಬ್ಬು ಹೊಂದಿರುವುದರಿಂದ ತೂಕ ಹೆಚ್ಚಾಗಬಹುದು. ಆದರೆ ಕೆನೆ ತೆಗೆದ ಹಾಲು ಹೆಚ್ಚು ಪ್ರೋಟೀನ್ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಉಪಯುಕ್ತ.
ಹಸುವಿನ ಹಾಲು ಎಮ್ಮೆಯ ಹಾಲಿಗಿಂತ ಕಡಿಮೆ ಕೊಬ್ಬು ಹೊಂದಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಹಸುವಿನ ಹಾಲಿನಲ್ಲಿ ಸುಮಾರು 3-4% ಕೊಬ್ಬು ಇರುತ್ತದೆ, ಆದರೆ ಎಮ್ಮೆಯ ಹಾಲಿನಲ್ಲಿ ಇದು 7-8% ವರೆಗೆ ಇರಬಹುದು. ಆದರೆ ಎಮ್ಮೆಯ ಹಾಲಿನಲ್ಲಿ ಪ್ರೋಟೀನ್ ಶೇ.10-11ರಷ್ಟು ಹೆಚ್ಚಿರುತ್ತದೆ.
ಹಾಲು ಎಲ್ಲರಿಗೂ ಒಂದೇ ರೀತಿ ಜೀರ್ಣವಾಗದು. ಕೆಲವು ಜನರಲ್ಲಿ ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಕಾರಣ ಹಾಲು ಕುಡಿದ ಮೇಲೆ ಗ್ಯಾಸು ಅಥವಾ ಅಸಿಡಿಟಿ ಉಂಟಾಗಬಹುದು. ಇದರಿಂದ ಹಾಲನ್ನು ಸಹಿಸಿಕೊಳ್ಳಲು ಆಗದಿರುವವರ ಸಂಖ್ಯೆ ಕಡಿಮೆಯೇ ಇದ್ದರೂ, ಈ ಅಂಶ ಗಮನದಲ್ಲಿರಬೇಕು.
ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದರಿಂದ ದೇಹ ಮತ್ತು ಮನಸ್ಸಿಗೆ ಆರಾಮವಾಗುತ್ತದೆ. ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಮಕ್ಕಳು, ವಯಸ್ಕರು ಎಲ್ಲ ಸಮಯದಲ್ಲೂ ಹಾಲು ಸೇವನೆ ಮಾಡಬಹುದು. ಮಕ್ಕಳಿಗೆ ಹಸುವಿನ ಹಾಲು ನೀಡುವುದು ಉತ್ತಮವಾದರೆ, ವಯಸ್ಕರು ಟೋನ್ಡ್ ಅಥವಾ ಕೆನೆರಹಿತ ಹಾಲನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಲಾಭಕಾರಿ.