-ಮಹಾಂತೇಶ ಕಣವಿ
‘ಕಿಲ್ಲರ್ ಬೈಪಾಸ್’ ಎಂಬ ಹಣೆಪಟ್ಟಿ ಕಟ್ಟಿಕೊಂಡ ಹುಬ್ಬಳ್ಳಿ-ಧಾರವಾಡ ಮಧ್ಯದ ಬೈಪಾಸ್ ರಸ್ತೆಯ ಅಗಲೀಕರಣ ಕಾರ್ಯ ಆರಂಭವಾಗಿದೆ. ನಿಧಾನಗತಿ ಕಾಮಗಾರಿಯಿಂದ ಜನ ಜಾನುವಾರು ಮರಣ ಮೃದಂಗ ನಿಲ್ಲುತ್ತಿಲ್ಲ.
ಹುಬ್ಬಳ್ಳಿ ಗಬ್ಬೂರ್ ಕ್ರಾಸ್‌ನಿಂದ ನರೇಂದ್ರ ಕ್ರಾಸ್‌ವರೆಗೂ 30 ಕಿ.ಮೀ ಬೈಪಾಸ್ ರಸ್ತೆ ನಿಜಕ್ಕೂ ಅಪಾಯಕಾರಿ. ಪ್ರಯಾಣಿಕರು ಬೈಪಾಸ್ ರಸ್ತೆ ದಾಟುವ ತನಕವೂ, ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾಗಿದೆ.
ಸಾಕಷ್ಟು ಸಾವು-ನೋವು ಸೃಷ್ಟಿಸಿರುವ ಈ ಕಿಲ್ಲರ್ ಬೈಪಾಸ್ ಸದಾ ಸುದ್ದಿಯಲ್ಲಿ ಇರುತ್ತದೆ. ಒಂದಿಲ್ಲೊಂದು ಅಪಘಾತ ಸಂಭವಿಸಿ, ಜನರು ಪ್ರಾಣ ಅರ್ಪಿಸುವುದು ತಪ್ಪಿಲ್ಲ. ಇದಕ್ಕೆ ಮುಕ್ತಿ ಯಾವಾಗ ಎಂಬುದು ಜನತೆಯ ಯಕ್ಷಪ್ರಶ್ನೆಯಾಗಿದೆ. ಬೈಪಾಸ್‌ನಲ್ಲಿ ಅಪಘಾತ ಸಂಭವಿಸಿದಾಗ ಮಾತ್ರವೇ ಕೇಳಿಬರುವ ಅಗಲೀಕರಣದ ಕೂಗು, ಮತ್ತೊಂದು ಅಪಘಾತ ಸಂಭವಿಸಿ, ಮತ್ತಷ್ಟು ಜನ ಪ್ರಾಣ ಬಿಡುವ ತನಕವೂ ಗೌಣವಾಗುವುದು ಖೇದಕರ ಸಂಗತಿ.
ಅಪಘಾತ ನಡೆದಾಗ ರಸ್ತೆ ಅಗಲೀಕರಣಕ್ಕೆ ಹೋರಾಟದ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು, ನಂತರ ತಾಂತ್ರಿಕ ಕಾರಣ ನೆಪವೊಡ್ಡಿ ಮೌನಕ್ಕೆ ಜಾರುವುದು ಮಾಮೂಲು. ಎರಡು ವರ್ಷಗಳ ಹಿಂದಷ್ಟೇ ಬೈಪಾಸ್ ರಸ್ತೆಯಲ್ಲಿ ಯರಿಕೊಪ್ಪ ಬಳಿ ದಾವಣಗೆರೆಯ 14 ಜನರು ಅಪಘಾತದಲ್ಲಿ ದುರ್ಮರಣ ಹೊಂದಿದ ಬಳಿಕ ಸಾರ್ವಜನಿಕರಿಂದ ಅಗಲೀಕರಣಕ್ಕೆ ತೀವ್ರ ಹೋರಾಟವೂ ನಡೆಯಿತು.
ಹೋರಾಟದ ಮೂಲಕ ಮೌನವಾಗಿದ್ದ ಸರ್ಕಾರದ ಗಮನ ಸೆಳೆದರೂ, ಸ್ಪಂದಿಸದ ಹಿನ್ನಲೆ ಸರ್ವೋಚ್ಛ ನ್ಯಾಯಾಲಯ ರಸ್ತೆ ಅಗಲೀಕರಣಕ್ಕೆ ಸರ್ಕಾರಕ್ಕೆ ನಿರ್ದೇಶನ ನೀಡಿದ ಬಳಿಕ, ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಜೀವ ಬಂದಿತ್ತು.
ನೈಸ್ ಕಂಪನಿ ಜತೆ ಒಪ್ಪಂದ ಮುಗಿದಿದೆ. ಅಗಲೀಕರಣದ ತಾಂತ್ರಿಕ ಸಮಸ್ಯೆ ಬಗೆಹರಿದಿವೆ. ಅನುದಾನ ಬಂದು, ಟೆಂಡರ್ ಆಗಿಯೂ ಬೈಪಾಸ್ ಅಗಲೀಕರಣಕ್ಕೆ ಆಗದಿರುವುದು ಏಕೆ? ಎಂಬುದು ಜನರ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಸ್ತೆಯ ಅಗಲೀಕರಣ ಕಾಮಗಾರಿ ಆರಂಭವಾಗಿದೆ. ಆದರೆ, ಕಾಮಗಾರಿ ಪ್ರಗತಿ ನಿಧಾನವಾಗಿದೆ. ಜನ-ಜಾನುವಾರು ಪ್ರಾಣ ರಕ್ಷಣೆಗೆ ತೀವ್ರಗತಿ ಕಾಮಗಾರಿ ಕೈಂಕರ್ಯಕ್ಕೆ ಮುಂದಾಗಬೇಕಿದೆ.
ಸಾವಿನ ಲೆಕ್ಕವಿಲ್ಲ!
ಬೈಪಾಸ್ ರಸ್ತೆ 1999ರಲ್ಲಿ ಆರಂಭವಾಗಿದ್ದು, ಈವರೆಗೂ 12 ಸಾವಿರಕ್ಕೂ ಅಧಿಕ ಜನರ ಬಲಿ ಪಡೆದಿದೆ. ಬೆಳಗಾವಿ ಹಾಗೂ ಬೆಂಗಳೂರಿಂದ ಷಟ್ಪಥ ರಸ್ತೆಯಲ್ಲಿ ಬರುವ ವಾಹನಗಳು, ದ್ವಿಪಥ ಬೈಪಾಸ್ ನಲ್ಲಿ ವಾಹನ ಹಿಂದಿಕ್ಕುವ (ಓವರ್ ಟ್ಯಾಕ್) ವೇಳೆಯಲ್ಲಿಯೇ ಬಹುತೇಕ ಅಪಘಾತ ಸಂಭವಿಸಿವೆ. ಲಾರಿ-ಬಸ್, ಕಾರು-ಲಾರಿ, ಟೆಂಪೋ-ಲಾರಿ, ದ್ವಿಚಕ್ರ ವಾಹನ ಹೀಗೆ ಅಪಘಾತದ ಲೆಕ್ಕವೇ ಇಲ್ಲ, ಜಾನುವಾರಗಳು ಸಹ ಪ್ರಾಣ ತೆತ್ತಿವೆ. ಸರ್ವಿಸ್ ರಸ್ತೆ ಇಲ್ಲದಿರುವುದೂ ಅಫಘಾತಗಳ ಹೆಚ್ಚಳಕ್ಕೆ ಕಾರಣ.
ಅಗಲೀಕರಣಕ್ಕೆ 530 ಕೋಟಿ ರೂ.
ಕೇಂದ್ರ ಕಲ್ಲಿದಲು ಗಣಿ ಸಚಿವ ಪ್ರಹ್ಲಾದ ಜೋಶಿ ಪ್ರಯತ್ನದ ಫಲವಾಗಿ ಬೈಪಾಸ್ ರಸ್ತೆಯ ಅಗಲೀಕರಣಕ್ಕೆ ಕೇಂದ್ರ ಸರ್ಕಾರ 530 ಕೋಟಿ ರೂ. ಅನುದಾನ ನೀಡಿತು. ಜತೆಗೆ ದೆಹಲಿ ಮೂಲದ ಕಂಪನಿಗೆ ಟೆಂಡರ್ ಆಗಿದೆ. ರಸ್ತೆಯ ಅಗಲೀಕರಣಕ್ಕೆ ಭೂಸ್ವಾಧೀನವೂ ನಡೆದಿದೆ. ಕಾಮಗಾರಿ ಆರಂಭಕ್ಕೆ ಪೂಜೆ ನೆರವೇರಿ ವರ್ಷ ಗತಿಸಿದರೂ, 30 ಕಿ.ಮೀ ಉದ್ದದ ರಸ್ತೆಯ ಪೈಕಿ ಒಂದಡಿ ರಸ್ತೆ ಅಗಲೀಕರಣ ಕಾಮಗಾರಿಯೂ ನಡೆದಿಲ್ಲ. ಅಷ್ಟಪಥ ರಸ್ತೆ ನಿರ್ಮಾಣಕ್ಕೆ ಇನ್ನೆಷ್ಟು ಜನರ ಬಲಿ ಬೇಕು? ಎಂಬುದು ಪ್ರಶ್ನೆಯಾಗಿದೆ.