ಹೊಸದಿಗಂತ ವರದಿ, ಮೈಸೂರು:
ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಯಾಕೆ ಮಾಡುತ್ತಿದ್ದೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ಜೆಡಿಎಸ್‌ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಬುಧವಾರ ಮೈಸೂರಿನಲಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಎರಡನೇ ಹಂತ ಶುರು ಮಾಡುತ್ತಿದ್ದಾರೆ. ಫೆ.18 ರಂದು ಗೋದಾವರಿ ನೀರಾವರಿ ಹಂಚಿಕೆ ಕುರಿತಂತೆ ಕೇಂದ್ರ ಸಭೆ ನಡೆಸಿದೆ. ಆದರೆ ಕರ್ನಾಟಕ ಪ್ರತಿನಿಧಿಸಿದ್ದ ಅಧಿಕಾರಿಯನ್ನ ಲೆಕ್ಕಕ್ಕೆ ಪರಿಗಣಿಸಿಲ್ಲ. ಹೀಗಾಗಿ ಕರ್ನಾಟಕಕ್ಕೆ ಶೂನ್ಯ ಹಂಚಿಕೆಯಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನ ಚರ್ಚೆ ಮಾಡುವ ಬದಲು, ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ಬೆಂಕಿ ಹಚ್ಚಿಸಿದ್ದೀರಾ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಈಗ ಮಾಡಲು ಹೊರಟಿದ್ದಾರೆ. ನೀವೇ ಮಣ್ಣಿನ ಮಕ್ಕಳೆಂದು ಬೋರ್ಡ್ ಹಾಕೊಂಡು ಹೋಗಿ, ನಾವೆಂದು ಮಣ್ಣಿನ ಮಕ್ಕಳು ಅಂತ ಹೇಳಿಕೊಂಡಿಲ್ಲ. ನಿಮಗೆ ಕಲ್ಲಿನ ಮಕ್ಕಳು ಅಂತ ಕರೆಯುತ್ತಾರೆ. ಈಗೇನೋ ಮಣ್ಣಿನ ಮಕ್ಕಳು ಅಂತ ಬಿಂಬಿಸಿಕೊಳ್ಳಲು ಹೋಗ್ತಿದ್ದೀರಾ, ಬೋರ್ಡ್ ಹಾಕಿಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರರ ವಿರುದ್ಧ ಹರಿಹಾಯ್ದರು.
ವಿಧಾನಸಭೆಯ ಅಧಿವೇಶನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯ್ತು. ಜೆಡಿಎಸ್ ನಿಂದ ಸದನ ಕಲಾಪಕ್ಕೆ ಅಡ್ಡಿಯಾದ ಉದಾಹರಣೆಗಳಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಸಹಕರಿಸಿದ್ದೆವು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಕಲ್ಲಪ್ಪ ಹಂಡಿಭಾಗ್, ಡಿವೈಎಸ್ ಪಿ ಗಣಪತಿ ಸಾವು ಸೇರಿದಂತೆ ಹಲವಾರು ಪ್ರಕರಣ ಬಂದವು. ಆದರೂ ನಾವು ಕಲಾಪ ನಡೆಯಲು ಸಹಕರಿಸಿದೆವು. ಇತಿಹಾಸ ಇರುವ ಪಕ್ಷ ಕಾಂಗ್ರೆಸ್ ಅಂತಾರೆ. ಹೋರಾಟ ಮಾಡಿದ ಹಿಂದಿನ ಕಾಂಗ್ರೆಸ್ ನಾಯಕರು ಬೇರೆ. ಈಗಿರುವ ಕಾಂಗ್ರೆಸ್ ನಾಯಕರೇ ಬೇರೆ ಎಂದು ಕಿಡಿಕಾರಿದರು.
ದಾಖಲೇ ಇಟ್ಟು ಸಚಿವರ ರಾಜೀನಾಮೆ ಕೇಳಬೇಕಲ್ವೆ;
ದೆಹಲಿಯ ಕೆಂಪು ಕೋಟೆಯಲ್ಲಿ ಕೇಸರ ಧ್ವಜ ಹಾರಿಸಲಾಗುವುದು ಎಂದು ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಹೋರಾಟ ಮಾಡುತ್ತಿದ್ದಾರೆ. ದಾಖಲೇ ಇಟ್ಟು ಸಚಿವರ ರಾಜೀನಾಮೆ ಕೇಳಬೇಕಲ್ವೆ. ಹಲವಾರು ಪಕ್ಷ ಕಟ್ಟಿ, ಬೆವರು ಸುರಿಸಿ ಬಂದ ವಿಪಕ್ಷ ನಾಯಕರ ವರ್ತನೆ ನೋಡುತ್ತಿದ್ದೇನೆ. ವಿಧಾನಮಂಡಲ ಇತಿಹಾಸದಲ್ಲೇ ಇದು ಕಪ್ಪು ಚುಕ್ಕೆ ಅಂತ ಕೆಲವರು ಹೇಳುತ್ತಿದ್ದಾರೆ. ಸಮವಸ್ತç ವಿವಾದ ಚರ್ಚೆ ಮಾಡುವ ಅವಕಾಶವನ್ನ ನಿರ್ನಾಮ ಮಾಡಿದ್ದರು. ಜೆಡಿಎಸ್ ಚರ್ಚೆಯಲ್ಲಿ ಪಾಲ್ಗೊಳ್ಳಬಾರದೆಂದು ಬಿಜೆಪಿ ಕಾಂಗ್ರೆಸ್ ಹುನ್ನಾರ ನಡೆಸಿರಬಹುದು. ನಾನು ಅತ್ತಂಗೆ ಆಡ್ತೀನಿ, ನೀವು ತೂಗಿದಂಗೆ ಮಾಡಿ ಅಂತ ಹುನ್ನಾರ ನಡೆಸಿ, ಈ ರೀತಿ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಸದನದಲ್ಲಿ ಹೋರಾಟ ಮಾಡಲು ಸಾಕಷ್ಟು ಅವಕಾಶ ಇತ್ತು.
ಯಾವ ಪುರುಷಾರ್ಥಕ್ಕಾಗಿ ನೀವು ರಾಜ್ಯಪಾಲರನ್ನ ಭೇಟಿ ಮಾಡಿದ್ದೀರಿ. ನಮ್ಮನ್ನಾದರೂ ಕೇಳಿದ್ದರೆ ಹೇಳ್ತಿದ್ವಿ. ನಾನು ಸಾಕಷ್ಟು ದಾಖಲೆ ಸಮೇತ ಚರ್ಚೆಗೆ ಹೋಗಿದ್ದೆ. ಚರ್ಚೆಗೆ ಅವಕಾಶ ಸಿಗಬಾರದೆಂದು ಸದನವನ್ನ ಗೊಂದಲ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಅಮಾಯಕ ಯುವಕರನ್ನ ಬಲಿಕೊಟ್ಟು ರಾಜಕೀಯ ಲಾಭ ಪಡೆಯುತ್ತಾರೆ. ಕೋಮು ಗಲಭೆಗಳಲ್ಲಿ ಯಾವುದೇ ರಾಜಕಾರಣಿಗಳ ಮಕ್ಕಳು ಸಾಯಲ್ಲ. ಅಮಾಯಕ ಬಡ ಮಕ್ಕಳನ್ನ ಸೆಳೆಯುತ್ತಾರಲ್ಲ ಅವರು ಬಲಿಯಾಗ್ತಿದ್ದಾರೆ.ಹಿಂದುತ್ವವನ್ನೇ ಇಟ್ಟುಕೊಂಡು ಹೋದರೆ ನೀವು ಸಕ್ಸಸ್ ಆಗಲ್ಲ ಎಂದರು.