ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಮತ್ತು ಅದರಿಂದ ಸಂಭವಿಸುತ್ತಿರುವ ಸಾವು-ನೋವುಗಳ ಕುರಿತು ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಬೀದಿನಾಯಿಗಳ ಕಡಿತದಿಂದ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ರಾಜ್ಯ ಸರ್ಕಾರಗಳೇ ನೇರವಾಗಿ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸುತ್ತಾ, ಕೇವಲ ಪ್ರಾಣಿಗಳ ಮೇಲಷ್ಟೇ ಕನಿಕರ ತೋರುತ್ತಿರುವುದನ್ನು ಪ್ರಶ್ನಿಸಿತು. “ಮಾನವನ ಮೇಲಿನ ದಾಳಿಗಳ ಬಗ್ಗೆ ಏಕೆ ಯಾರೂ ಮಾತನಾಡುತ್ತಿಲ್ಲ? ಇಂತಹ ಘಟನೆಗಳ ಬಗ್ಗೆ ನ್ಯಾಯಾಲಯ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ” ಎಂದು ಪೀಠವು ಖಾರವಾಗಿ ನುಡಿಯಿತು.
ಒಂಬತ್ತು ವರ್ಷದ ಮಗುವಿನ ಸಾವನ್ನು ಉಲ್ಲೇಖಿಸಿದ ನ್ಯಾಯಾಲಯ, “ನಾಯಿ ಪ್ರಿಯರ ಸಂಘಟನೆಗಳು ಪೋಷಿಸುವ ಬೀದಿನಾಯಿಗಳಿಂದ ಮಗು ಸಾವನ್ನಪ್ಪಿದರೆ ಅದಕ್ಕೆ ಹೊಣೆ ಯಾರು?” ಎಂದು ಪ್ರಶ್ನಿಸಿತು. ಈ ಹಿನ್ನೆಲೆಯಲ್ಲಿ, ನಾಯಿ ಕಡಿತದ ಸಾವುಗಳಿಗೆ ರಾಜ್ಯ ಸರ್ಕಾರಗಳ ಜೊತೆಗೆ, ಆ ನಾಯಿಗಳನ್ನು ಪೋಷಿಸುವ ಸಂಸ್ಥೆಗಳು ಮತ್ತು ಮಾಲೀಕರನ್ನೂ ಹೊಣೆಗಾರರನ್ನಾಗಿ ಮಾಡುವ ಕಠಿಣ ಕಾನೂನು ಚೌಕಟ್ಟನ್ನು ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಸುಳಿವು ನೀಡಿದೆ.
ನಾಯಿಗಳಿಗೆ ಆಹಾರ ನೀಡುವುದು ಅಥವಾ ಆರೈಕೆ ಮಾಡುವುದಕ್ಕೆ ನ್ಯಾಯಾಲಯ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, “ಜನರು ನಾಯಿಗಳನ್ನು ಸಾಕಲು ಅಥವಾ ಆಹಾರ ನೀಡಲು ಬಯಸಿದರೆ ಅದನ್ನು ತಮ್ಮ ಸ್ವಂತ ಮನೆಯ ಆವರಣದಲ್ಲಿ ಮಾಡಲಿ. ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಂದ ಇತರರಿಗೆ ತೊಂದರೆಯಾಗಲು ಬಿಡಬಾರದು” ಎಂದು ನ್ಯಾಯಪೀಠವು ಸ್ಪಷ್ಟವಾಗಿ ತಿಳಿಸಿದೆ.
ನಾಯಿಗಳ ಮೇಲಿನ ಕ್ರೌರ್ಯದಷ್ಟೇ ಸಾರ್ವಜನಿಕರ ಮೇಲಿನ ದಾಳಿಯೂ ಗಂಭೀರವಾದುದು. ಮಕ್ಕಳು ಮತ್ತು ವೃದ್ಧರ ಮೇಲೆ ನಾಯಿಗಳು ದಾಳಿ ಮಾಡುತ್ತಿರುವ ವೀಡಿಯೊಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮುಂದಿನ ವಿಚಾರಣೆಯಲ್ಲಿ ಕಠಿಣವಾಗಿ ಪ್ರಶ್ನಿಸುವುದಾಗಿ ಎಚ್ಚರಿಕೆ ನೀಡಿದೆ.


