ಸತ್ಯವನ್ನು ಹೇಳಲು ನಾನು ಏಕೆ ಹಿಂಜರಿಯಬೇಕು: ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಹೊಗಳಿಕೆಗೆ ಶಶಿ ತರೂರ್‌ ಸಮರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್;

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸವನ್ನು ಹೊಗಳುವ ಮೂಲಕ ಸ್ವಪಕ್ಷೀಯರ ಹುಬ್ಬೇರುವಂತೆ ಮಾಡಿರುವ ತಿರುವನಂಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಳ್ಳೆಯದನ್ನು ಹೊಗಳಲು ಮತ್ತು ಕೆಟ್ಟದ್ದನ್ನು ತೆಗಳಲು ನನಗೆ ಯಾರ ಅನುಮತಿಯೂ ಬೇಡ ಎಂದು ಸೂಚ್ಯವಾಗಿ ಹೇಳಿದ್ದಾರೆ.

ನಾನು ಕಳೆದ 16 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ನಮ್ಮ ಸರ್ಕಾರವಾಗಲಿ ಅಥವಾ ಬೇರೆ ಪಕ್ಷದ ಸರ್ಕಾರವಾಗಲಿ, ಯಾರಾದರೂ ಉತ್ತಮವಾದ ಕೆಲಸ ಮಾಡಿದರೆ ಅದನ್ನು ಗಟ್ಟಿಯಾಗಿ ಸಮರ್ಥಿಸಿದ್ದೇನೆ. ರಾಜಕೀಯದಲ್ಲಿ ಪ್ರತಿಸ್ಪರ್ಧಿಗಳ ಉತ್ತಮ ಕಾರ್ಯವನ್ನು ಒಪ್ಪಿಕೊಳ್ಳುವ ಮನಸ್ಸು ಇರಬೇಕು ಎಂಬುದು ನನ್ನ ಭಾವನೆ ಎಂದು ಶಶಿ ತರೂರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ವಿರೋಧಿಗಳು ಒಳ್ಳೆಯದನ್ನು ಮಾಡಿದಾಗ ಅದನ್ನು ಒಪ್ಪಿಕೊಳ್ಳುವ ಮತ್ತು ಹೊಗಳುವ ಧೋರಣೆಯನ್ನು ನಾನು ಅನುಸರಿಸುತ್ತೇನೆ. ಅಷ್ಟಕ್ಕೂ ನಾನು ಭಾರತದ ಪ್ರಧಾನಮಂತ್ರಿಗಳ ವಿದೇಶ ಪ್ರವಾಸವನ್ನು ಹೊಗಳಿದ್ದೇನೆ. ಭಾರತದ ಪ್ರಧಾನಮಂತ್ರಿ ನನಗೂ ಪ್ರಧಾನಮಂತ್ರಿ ಅಲ್ಲವೇ? ಎಂದು ಶಶಿ ತರೂರ್‌ ಪ್ರಶ್ನಿಸಿದ್ದಾರೆ.

ರಾಜಕಾರಣದಲ್ಲಿ ಯಾರನ್ನಾದರೂ ಯಾವಾಗಲೂ ಹೊಗಳುತ್ತಲೇ ಇದ್ದರೆ, ಅಥವಾ ಸದಾಕಾಲ ಯಾರನ್ನಾದರೂ ತೆಗಳುತ್ತಲೇ ಇದ್ದರೆ, ಜನ ನನ್ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಕೆಲವು ಕೊಡು-ಕೊಳ್ಳುವಿಕೆಗಳು ಇರಬೇಕು. ವಿರೋಧಿಗಳನ್ನು ಹೊಗಳುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಕಾಂಗ್ರೆಸ್‌ ಸಂಸದ ನುಡಿದರು.

ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೊಂದಿಗಿನ ಮಾತುಕತೆಯಲ್ಲಿ ಉತ್ತಮ ಅಂಶಗಳನ್ನು ನಾನು ಕಂಡುಕೊಂಡಿದ್ದೇನೆ. ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ, ವಾಣಿಜ್ಯ ಹಾಗೂ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ನಾನು ನಂಬಿದ್ದೇನೆ. ಈ ಸತ್ಯವನ್ನು ನಾನು ಹೇಳಲು ಏಕೆ ಹಿಂಜರಿಯಬೇಕು ಎಂದು ಶಶಿ ತರೂರ್‌ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಯಲ್ಲಿ ಇನ್ನೂ ಹಲವು ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆತಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಪ್ರಮುಖವಾಗಿ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಬಗ್ಗೆ ಪ್ರಧಾನಿ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಮಾತನಾಡಿದ್ದಾರೋ ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ. ಉಭಯ ನಾಯಕರು ಈ ಕುರಿತು ಖಾಸಗಿ ಚರ್ಚೆಯನ್ನಾದರೂ ಮಾಡಿರಬಹುದು ಎಂದು ನಾನು ಅಪೇಕ್ಷಿಸುತ್ತೇನೆ ಎಂದು ತಿರುವನಂತಪುರಂನ ಸಂಸದರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!