Thursday, November 20, 2025

ಆಧುನಿಕ ಸಮಾಜದಲ್ಲಿ ತಲಾಖ್-ಎ-ಹಸನ್ ಪದ್ಧತಿಯನ್ನು ಏಕೆ ಅನುಮತಿಸಬೇಕು?: ಸುಪ್ರೀಂ ಕೋರ್ಟ್ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಸ್ಲಿಂ ಸಮುದಾಯದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಚ್ಛೇದನ ಪ್ರಕ್ರಿಯೆಯಾದ ತಲಾಖ್-ಎ-ಹಸನ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಲಾಖ್ ನೀಡಲು ಮೂರನೇ ವ್ಯಕ್ತಿ ನೊಟೀಸ್ ಕಳುಹಿಸುವುದು ಮಹಿಳೆಯರ ಘನತೆಗೆ ಧಕ್ಕೆ ತರುವ ಕೃತ್ಯವಾಗಿದೆ. ನೊಟೀಸ್ ಕಳುಹಿಸಲು ವಕೀಲರನ್ನು ಸಂಪರ್ಕಿಸಬಹುದಾದ ಪತಿ ಈ ಬಗ್ಗೆ ನೇರವಾಗಿ ತನ್ನ ಪತ್ನಿಯ ಬಳಿ ಯಾಕೆ ಸಂವಹನ ಮಾಡಬಾರದು ಎಂದು ಪ್ರಶ್ನಿಸಿದೆ. ಸುಸಂಸ್ಕೃತ ಆಧುನಿಕ ಸಮಾಜವು ಈ ರೀತಿಯ ಪದ್ಧತಿಯನ್ನು ಏಕೆ ಅನುಮತಿಸಬೇಕು? ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಪ್ರಶ್ನಿಸಿದ್ದಾರೆ.

ಪತಿಯ ಉಪಸ್ಥಿತಿಯಿಲ್ಲದೆ ವಕೀಲರ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ಒಳಗೊಂಡ ಪ್ರಕರಣವನ್ನು ಸುಪ್ರೀಂ ಕೋರ್ಟ್ ಪ್ರಸ್ತುತ ವಿಚಾರಣೆ ನಡೆಸುತ್ತಿದೆ.

ವಿಚ್ಛೇದನ ವೈಯಕ್ತಿಕ ವಿಷಯ. ಇದರಲ್ಲಿ ಮೂರನೇ ವ್ಯಕ್ತಿ ನೊಟೀಸ್ ಕಳುಹಿಸುವುದರ ಸಾಮಾಜಿಕ ಪರಿಣಾಮದ ಬಗ್ಗೆ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್ ತಲಾಖ್-ಎ-ಹಸನ್‌ನ ಸಾಂವಿಧಾನಿಕ ಪುನರ್ ವಿಮರ್ಶೆಗೆ ಬುಧವಾರ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಉಜ್ಜಲ್ ಭುಯಾನ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಸೇರಿದಂತೆ ಐದು ನ್ಯಾಯಾಧೀಶರ ಪೀಠವು ತಲಾಖ್-ಎ-ಹಸನ್‌ನ ಸವಾಲಿನ ಬಗ್ಗೆ ಉಲ್ಲೇಖಿಸಿದ್ದಾರೆ.

ವಿಚ್ಛೇದನ ನೋಟಿಸ್‌ನಲ್ಲಿ ಪತಿಯ ಸಹಿ ಇಲ್ಲದಿದ್ದರೆ, ಅದನ್ನು ಮಾನ್ಯ ವಿಚ್ಛೇದನವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಸ್ಲಿಂ ಪುರುಷರು ತ್ರಿವಳಿ ತಲಾಖ್ ಉಚ್ಚರಿಸುವ ಏಕಪಕ್ಷೀಯ ಹಕ್ಕನ್ನು ಪ್ರಶ್ನಿಸಿ ಪತ್ರಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ವಿಚ್ಛೇದನ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪತ್ರಕರ್ತೆ ಬೆನಜೀರ್ ಹೀನಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದರು.ಈ ಪದ್ಧತಿಯು ತರ್ಕಬದ್ಧವಲ್ಲದ, ಅನಿಯಂತ್ರಿತ ಮತ್ತು ಸಂವಿಧಾನದ 14, 15, 21 ಮತ್ತು 25 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಹೀನಾ ವಾದಿಸಿದ್ದರು.

ತಲಾಖ್-ಎ-ಹಸನ್‌ ಧಾರ್ಮಿಕ ಆಚರಣೆಯನ್ನು ರದ್ದುಗೊಳಿಸುವುದರ ಬಗ್ಗೆ ಅಲ್ಲ. ಅದು ಸಾಂವಿಧಾನಿಕ ತತ್ತ್ವಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ. ಇಸ್ಲಾಮಿಕ್ ಕಾನೂನಿನಲ್ಲಿ ತಲಾಖ್‌ ವಿವರಣೆಗಳು ಮತ್ತು ಅಗತ್ಯವಿರುವ ಕಾನೂನು ಪ್ರಶ್ನೆಗಳ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿದೆ.

ಹೊಸ ತ್ರಿವಳಿ ತಲಾಖ್ ಪ್ರಕರಣದಲ್ಲಿ ಪುರುಷರು ತಮ್ಮ ಪತ್ನಿಗೆ ವಕೀಲರ ಮೂಲಕ ನೊಟೀಸ್ ಗಳನ್ನು ಕಳುಹಿಸುತ್ತಿದ್ದರು. ತಲಾಖ್-ಎ-ಹಸನ್ ಮೂಲಕ ಪತಿಗೆ ಮೂರು ತಿಂಗಳ ಅವಧಿಯಲ್ಲಿ ತಿಂಗಳಿಗೊಮ್ಮೆ ತಲಾಖ್ ಎಂದು ಹೇಳಲು ಅವಕಾಶವಿದೆ. ಒಂದು ವೇಳೆ ದಂಪತಿ ಒಟ್ಟಿಗೆ ವಾಸಿಸಲು ಇಚ್ಛೆ ಪಡದೇ ಇದ್ದರೆ ಮೂರನೇ ಬಾರಿ ತಲಾಖ್ ಘೋಷಣೆ ಬಳಿಕ ವಿಚ್ಛೇದನವು ಅಂತಿಮವಾಗುತ್ತದೆ. ಮೊದಲ ಅಥವಾ ಎರಡನೇ ಬಾರಿ ತಲಾಖ್ ಹೇಳಿದ ಮೇಲೆ ರದ್ದುಗೊಳಿಸುವ ಅವಕಾಶವಿರುತ್ತಿತ್ತು. 2017ರಲ್ಲಿ ನ್ಯಾಯಾಲಯವು ಈ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಹೇಳಿ ರದ್ದುಪಡಿಸಿತ್ತು.

ನ್ಯಾಯಾಲಯದಲ್ಲಿ ಹೀನಾ ಅವರ ಉಪಸ್ಥಿತಿಯು ಸಮಸ್ಯೆಯ ಆಳದ ಬಗ್ಗೆ ಒತ್ತಿ ಹೇಳುತ್ತದೆ ಎಂದ ನ್ಯಾಯಮೂರ್ತಿ ಕಾಂತ್, ಇಂದು ನಮ್ಮ ಮುಂದೆ ಒಬ್ಬ ಪತ್ರಕರ್ತ, ವೈದ್ಯರು ಇದ್ದಾರೆ. ಹೀಗಾದರೆ ದೂರದ ಪ್ರದೇಶಗಳಲ್ಲಿ ವಾಸಿಸುವ ಯಾರೂ ಕೇಳಲಾಗದ ಧ್ವನಿಗಳ ಬಗ್ಗೆ ಯೋಚಿಸಬೇಕಿದೆ. ನ್ಯಾಯಲಯ ಪ್ರವೇಶವು ಧ್ವನಿ ಎತ್ತಬಲ್ಲವರಿಗೆ ಮಾತ್ರ ಸೀಮಿತವಾಗಿರಬಾರದು ಎಂದು ಕೂಡ ಅವರು ತಿಳಿಸಿದ್ದಾರೆ.

ಈ ಪ್ರಕರಣ ಕೇವಲ ವೈಯಕ್ತಿಕವಾದದ್ದು ಅಲ್ಲ. ಇದು ತೀವ್ರ ತಾರತಮ್ಯವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಮೂರ್ತಿ ಕಾಂತ್ ತಿಳಿಸಿದ್ದಾರೆ.

ಹೀನಾ ಅವರ ಮಾಜಿ ಪತಿಯ ಪರವಾಗಿ ಹಿರಿಯ ವಕೀಲ ಎಂ.ಆರ್. ಶಂಶಾದ್ ಇದನ್ನು ಸಮರ್ಥಿಸಿಕೊಂಡರೆ ನ್ಯಾಯಪೀಠವು ಮುಂದಿನ ವಿಚಾರಣೆಗೆ ಅವರ ಪತಿ ಹಾಜರಾಗುವಂತೆ ನ್ಯಾಯಪೀಠ ಆದೇಶಿಸಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಸಮಸ್ತ ಕೇರಳ ಜಮಿಯಾತುಲ್ ಉಲಮಾ ಮಧ್ಯಪ್ರವೇಶಿಸಲು ಪೀಠವು ಅನುಮತಿ ನೀಡಿತು. ಅಲ್ಲದೇ ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ, ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಕೂಡ ಅಭಿಪ್ರಾಯ ಸಲ್ಲಿಸುವಂತೆ ತಿಳಿಸಿದೆ.

ತಲಾಖ್-ಎ-ಹಸನ್ ಎಂದರೇನು? ತಲಾಖ್​-ಎ- ಹಸನ್ ಎಂದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ವಿಚ್ಛೇದನ ನೀಡುತ್ತಾನೆ. ಮೂರು ತಿಂಗಳಲ್ಲಿ ಮೂರು ಬಾರಿ ವಿಚ್ಛೇದನ ನೀಡುತ್ತಾನೆ. ಮೊದಲ ವಿಚ್ಛೇದನ: ಮಹಿಳೆ ಮುಟ್ಟಿನ ನಂತರ ಪತಿ ಲೈಂಗಿಕ ಸಂಭೋಗವನ್ನು ಹೊಂದಿರದಿದ್ದರೆ, ಪತಿ ಮೊದಲ ವಿಚ್ಛೇದನವನ್ನು ನೀಡುತ್ತಾನೆ.

ಎರಡನೇ ವಿಚ್ಛೇದನ: ಅದಾದ ನಂತರ, ಮುಂದಿನ ಮುಟ್ಟು ಬಂದು ಆಕೆ ಶುದ್ಧಳಾದಾಗ, ಅವನು ಈ ಎರಡನೇ ತುಹಾರ್‌ನಲ್ಲಿ ಎರಡನೇ ವಿಚ್ಛೇದನವನ್ನು ನೀಡುತ್ತಾನೆ.

ಮೂರನೇ ತಲಾಖ್: ಅವನ ನಂತರ ಮೂರನೇ ತುಹಾರ್ ಬಂದಾಗ, ಅವನು ಮೂರನೇ ತಲಾಖ್ ನೀಡುತ್ತಾನೆ. ಮಹಿಳೆಯು ಋತುಚಕ್ರದಲ್ಲಿರುವಾಗ ಅಥವಾ ಗರ್ಭಿಣಿಯಾಗಿದ್ದಾಗ ವಿಚ್ಛೇದನ ನೀಡಲಾಗುವುದಿಲ್ಲ. ಈಜಿಪ್ಟ್, ಸಿರಿಯಾ, ಜೋರ್ಡಾನ್, ಕುವೈತ್, ಇರಾಕ್ ಮತ್ತು ಮಲೇಷ್ಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳಲ್ಲಿ ತ್ರಿವಳಿ ತಲಾಖ್ ಅನ್ನು ನಿಷೇಧಿಸಲಾಗಿದೆ.

ತಲಾಖ್-ಎ-ಹಸನ್ ಅಡಿಯಲ್ಲಿ, ಮೂರನೇ ತಿಂಗಳೊಳಗೆ ತಲಾಖ್ ಪದವನ್ನು ಮೂರನೇ ಬಾರಿಗೆ ಉಚ್ಚರಿಸಿದ ನಂತರ ವಿಚ್ಛೇದನವನ್ನು ಔಪಚಾರಿಕಗೊಳಿಸಲಾಗುತ್ತದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಇಂತಹ ಪದ್ಧತಿಯನ್ನು ನಾಗರಿಕ ಸಮಾಜದಲ್ಲಿ ಹೇಗೆ ಮುಂದುವರಿಸಲು ಅನುಮತಿಸಬಹುದು ಎಂದು ಪೀಠ ಕೇಳಿದೆ.

error: Content is protected !!