ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿಲ್ಲ ಎಂದರೆ ಮಾಡಿಕೊಂಡಿಲ್ಲ,ಇದಕ್ಕೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ಗೂ ಏನು ಸಂಬಂಧ? ಕುಮಾರಸ್ವಾಮಿ ಅವರು ಏಕೆ ಗಾಬರಿಯಾಗಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು,ಕಾಂಗ್ರೆಸ್‌ಗೆ ನಾನೇ ಟಾರ್ಗೆಟ್, ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎನ್ನುವ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ನಾನು ಹಾಗೂ ಸಿದ್ದರಾಮಯ್ಯ ಎಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ಸುದ್ದಿಗೆ ನಾವು ಹೋಗಿಲ್ಲ. ನಮಗೆ ಈ ವಿಚಾರ ಗೊತ್ತೂ ಇಲ್ಲ. ಯಾರೋ ಇದರ ಬಗ್ಗೆ ಪಿಐಎಲ್ ಹಾಕಿದ್ದಾರೆ. ಇದು ಬಹಳ ವರ್ಷದಿಂದ ನಡೆದಿದೆ. ಭೂಒತ್ತುವರಿ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ನ್ಯಾಯಾಲಯವು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಇದರ ಬಗ್ಗೆ ನಾವು ಮಾಧ್ಯಮದಲ್ಲಿ ಓದಿದ್ದೇವೆ. ನ್ಯಾಯಾಲಯ ಕ್ರಮ ತೆಗೆದುಕೊಳ್ಳಲು ಗಡುವು ನೀಡಿದ ಕಾರಣಕ್ಕೆ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ ಎಂದರು.
ಅಧಿಕಾರಿಗಳು ನೋಟಿಸ್ ನೀಡದೆ ಅಳತೆ ಮಾಡಲು ಸಾಧ್ಯವೇ? ಮೊದಲಿನಿಂದಲೂ ಅಳತೆ ಮಾಡಲಾಗಿತ್ತು. ಅವರ ಸಿಬ್ಬಂದಿ ಹೆಚ್ಚುವರಿ ಭೂಮಿಯಿದ್ದರೆ ವಾಪಸ್ ತೆಗೆದುಕೊಳ್ಳಿ ಎಂದು ಏಕೆ ಪತ್ರ ಬರೆದಿದ್ದಾರೆ? ಎಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ತಿಳಿದಿಲ್ಲ. ಅವರು ನಮ್ಮ ಮೇಲೆ ಈ ಹಿಂದೆ ಏನು ಮಾತನಾಡಿದ್ದಾರೆ ಎಂಬುದನ್ನು ಈಗ ಒಮ್ಮೆ ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನನ್ನ ಮೇಲೂ ಈ ಹಿಂದೆ ಅವರು ಬೇಕಾದಷ್ಟು ಆರೋಪ ಮಾಡಿಲ್ಲವೇ? ಗ್ರಾನೈಟ್ ಅದು, ಇದು ಕದ್ದಿದ್ದೀರಿ ಎಂದು ಹೇಳಿರಲಿಲ್ಲವೇ? ನನ್ನ ಹೆಂಡತಿ, ತಂಗಿ, ತಮ್ಮನ ಮೇಲೆ ತನಿಖೆ ನಡೆದಿರಲಿಲ್ಲವೇ? ಬಳ್ಳಾರಿಗೆ ಹೋಗಿ ಕದ್ದುಕೊಂಡು ಬಂದಿದ್ದೀರಿ ಎಂದು ಪ್ರಕರಣ ದಾಖಲಿಸಿರಲಿಲ್ಲವೇ? ಇವರ ಅಣ್ಣ ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಅಧಿಕಾರಿಗಳಿಗೆ ಬೇಕಾದಂತೆ ಅರ್ಜಿ ಬರೆದುಕೊಟ್ಟಿರಲಿಲ್ಲವೇ? ನಮಗೆಲ್ಲಾ ಇದು ತಿಳಿದಿಲ್ಲವೇ? ಸುಮ್ಮನೆ ಕಾಂಗ್ರೆಸ್, ಕಾಂಗ್ರೆಸ್ ಎನ್ನುತ್ತಾರೆ. ಯಾವ ಕಾಂಗ್ರೆಸ್ಸಿಗರು ಇವರ ವಿಚಾರಕ್ಕೆ ಹೋಗಿಲ್ಲ. ಇವರ ಜಮೀನು ಇದ್ದರೆ ಉಳಿದುಕೊಳ್ಳುತ್ತದೆ. ಇಲ್ಲದಿದ್ದರೇ ಬಿಟ್ಟುಕೊಡಬೇಕಾಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.