ಹೈಕೋರ್ಟ್ ಕೇಸ್‌ಗಳ ಬಗ್ಗೆ ಇಷ್ಟು ತಾತ್ಸಾರವೇಕೆ?: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ

ಹೊಸದಿಗಂತ ವರದಿ,ಮೈಸೂರು;

ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ಕಂದಾಯ ಇಲಾಖೆಗೆ ಸಂಬoಧಿಸಿದoತೆ ಹೈಕೋರ್ಟ್ ನಲ್ಲಿ ಒಟ್ಟು ೭೨೧ ಪ್ರಕರಣಗಳಿವೆ. ಈ ಪೈಕಿ ೩೮೬ ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ. ವಕಾಲತ್ತು ಸಲ್ಲಿಸಲು ಏನ್ರೀ ಸಮಸ್ಯೆ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು.

ಬುಧವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,
ಕಳೆದ ಆಗಸ್ಟ್ ತಿಂಗಳಿನಿoದ ಸತತ ಸೂಚನೆ ನೀಡಿದ ನಂತರವೂ ಮೈಸೂರು ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಪರಿಣಾಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇ-ಆಫೀಸ್ ಬಳಸದ ಅಧಿಕಾರಿಗಳಿಗೆ ನೋಟೀಸ್
ಇದೇ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಮೈಸೂರಿನ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನವಾಗಿದೆ ಎಂದು ವರದಿ ನೀಡಿದ್ದೀರಿ. ಆದರೆ, ಇ-ಆಫೀಸ್ ನಲ್ಲಿ ಎಷ್ಟು ಫೈಲ್ ರಚಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, “ಉಪ ವಿಭಾಗಾಧಿಕಾರಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಎಲ್ಲಾ ಕಡತಗಳನ್ನೂ ಇ-ಆಫೀಸ್ ಮೂಲಕವೇ ಕಳುಹಿಸಲಾಗುತ್ತಿದೆ. ತಹಶೀಲ್ದಾರ್ ಕಚೇರಿಗಳಲ್ಲೂ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ” ಎಂದರು.

“ಎಲ್ಲಾ ತಹಶೀಲ್ದಾರ್ ಗಳೂ ಇನ್ಮುಂದೆ ಇ-ಆಫೀಸ್ ಮೂಲಕವೇ ಕಡತಗಳ ವಿಲೇವಾರಿ ನಡೆಸಬೇಕು. ಭೌತಿಕ ಕಡತಗಳನ್ನು ಸ್ವೀಕರಿಸುವುದಿಲ್ಲ. ಶೇ. ೮೦ಕ್ಕೂ ಹೆಚ್ಚು ಕಡತಗಳನ್ನು ಇ-ಆಫೀಸ್ ಮೂಲಕ ವಿಲೇವಾರಿ ನಡೆಸದ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಸಚಿವರು ತಿಳಿಸಿದರು.

ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು ನೀಡಿ
ನಮೂನೆ ೫೦, ೫೩, ೫೭ಕ್ಕೆ ಸಂಬoಧಿಸಿದoತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ. ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.

ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಮುಂದಿನ ೬ ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!