Why So | ವೈದ್ಯರು ಬಿಳಿ ಕೋಟ್, ವಕೀಲರು ಕಪ್ಪು ಕೋಟ್‌ ಧರಿಸೋದು ಯಾಕೆ? ಇವೆರಡರ ಹಿಂದಿರುವ ಮಹತ್ವ ಏನು?

ನಾವು ಆಸ್ಪತ್ರೆಗಳಿಗೆ ಹೋದರೆ ಬಿಳಿ ಬಣ್ಣದ ಕೋಟ್‌ ಧರಿಸಿರುವ ವೈದ್ಯರನ್ನು, ನ್ಯಾಯಾಲಯದೊಳಗೆ ಕಪ್ಪು ಕೋಟ್‌ ಹಾಕಿಕೊಂಡಿರುವ ವಕೀಲರನ್ನು ನೋಡುತ್ತೇವೆ. ಯಾಕೆ ವಕೀಲರು ಮತ್ತು ನ್ಯಾಯಾಧೀಶರು ಯಾವಾಗಲೂ ಕಪ್ಪು ಬಣ್ಣದ ಕೋಟುಗಳನ್ನೇ ಧರಿಸುತ್ತಾರೆ. ವೈದ್ಯರು ಏಕೆ ಬಿಳಿ ಬಣ್ಣದ ಕೋಟನ್ನು ಮಾತ್ರ ಧರಿಸುತ್ತಾರೆ, ಇದರ ಹಿಂದೆ ಏನಾದರೂ ಕಾರಣಗಳಿದೆಯಾ, ಎಂಬ ಪ್ರಶ್ನೆ ಬಹುತೇಕರ ಮನಸ್ಸಿನಲ್ಲಿ ಮೂಡುವುದು ಸಹಜ. ಈ ನಿರ್ದಿಷ್ಟ ಬಣ್ಣದ ಕೋಟ್‌ಗಳು ಅವರ ವೃತ್ತಿಯ ಗಂಭೀರತೆಗೆ ಸಂಬಂಧಿಸಿದ್ದು, ಇದರ ಹಿಂದೆ ಇತಿಹಾಸವೂ ಇದೆ.

ವಕೀಲರಿಗೆ ಕಪ್ಪು ಬಣ್ಣದ ಕೋಟು ಯಾಕೆ?
ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಬಣ್ಣದ ಕೋಟ್ ಧರಿಸುವ ಅಭ್ಯಾಸ ಇಂಗ್ಲೆಂಡ್‌ನಿಂದ ಆರಂಭವಾಯಿತು. 17ನೇ ಶತಮಾನದಲ್ಲಿ ಬ್ರಿಟನ್‌ನ ರಾಜ ಚಾರ್ಲ್ಸ್ II ಅವರ ನಿಧನದ ಬಳಿಕ, ಅವರ ಸ್ಮರಣಾರ್ಥವಾಗಿ ವಕೀಲರು ಕಪ್ಪು ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಕ್ರಮೇಣ ಅದು ಕಾನೂನು ವೃತ್ತಿಯ ಶಿಷ್ಟಾಚಾರವಾಗಿ ಬೆಳೆಯಿತು.

ಕಪ್ಪು ಬಣ್ಣವು ಗಂಭೀರತೆ, ಶಿಸ್ತು ಮತ್ತು ನಿಷ್ಪಕ್ಷಪಾತತೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ನ್ಯಾಯಾಲಯದೊಳಗೆ ನಿರ್ಧಾರಗಳನ್ನು ಭಾವನಾತ್ಮಕವಾಗಿ ಅಲ್ಲದೆ ನ್ಯಾಯದ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕಾರಣ, ಕಪ್ಪು ಬಣ್ಣದಿಂದ ಆ ವಾತಾವರಣವನ್ನು ಪ್ರತಿನಿಧಿಸಲಾಗುತ್ತದೆ. ಜೊತೆಗೆ ಕಪ್ಪು ಬಣ್ಣ ಕಲೆಗಳನ್ನು ತೋರಿಸದಿರುವುದರಿಂದ, ವಕೀಲರ ವೃತ್ತಿಪರ ದೃಷ್ಟಿಕೋನವೂ ಉಳಿಯುತ್ತದೆ.

ವೈದ್ಯರಿಗೆ ಬಿಳಿ ಬಣ್ಣದ ಕೋಟ್ ಯಾಕೆ?
ವೈದ್ಯರು ಬಿಳಿ ಕೋಟ್ ಧರಿಸುವ ಆಚಾರ 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭವಾಯಿತು. ವೈದ್ಯಕೀಯ ಕ್ಷೇತ್ರವು ವಿಜ್ಞಾನಾಧಾರಿತ ಸ್ವರೂಪ ಪಡೆಯುತ್ತಿದ್ದಂತೆಯೇ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಬಿಳಿ ಬಣ್ಣವು ಶುದ್ಧತೆ, ನಂಬಿಕೆ ಮತ್ತು ಭದ್ರತೆಯ ಸಂಕೇತವಾಗಿದ್ದು, ವೈದ್ಯರು ಈ ಕೋಟ್‌ ಮೂಲಕ ರೋಗಿಗಳಲ್ಲಿ ವಿಶ್ವಾಸ ಮೂಡಿಸುತ್ತಾರೆ.

ಬಿಳಿ ಬಣ್ಣದ ಮೇಲೆ ಯಾವ ಕಲೆಗಳು ಅಥವಾ ರಕ್ತದ ಗುರುತುಗಳು ಆಗುತ್ತಿದ್ದರೂ ಸುಲಭವಾಗಿ ಗೋಚರಿಸುತ್ತವೆ. ಇದರಿಂದ ವೈದ್ಯರು ತಮ್ಮ ಉಡುಪುಗಳನ್ನು ತಕ್ಷಣವೇ ಬದಲಾಯಿಸುವ ಮೂಲಕ ಶುದ್ಧತೆಯ ಪಾಠವನ್ನು ಪಾಲಿಸುತ್ತಾರೆ. ಇದಲ್ಲದೇ ಬಿಳಿ ಕೋಟ್ ಧರಿಸಿರುವ ಡಾಕ್ಟರ್‌ರನ್ನು ನೋಡಿದಾಗ ರೋಗಿಗಳಿಗೆ ಒಂದು mental comfort ಕೂಡ ಸಿಗುತ್ತದೆ.

ಒಟ್ಟಾರೆ ವೈದ್ಯರ ಬಿಳಿ ಕೋಟ್ ಆರೋಗ್ಯ ಮತ್ತು ನೈರ್ಮಲ್ಯವನ್ನು ಪ್ರತಿನಿಧಿಸುತ್ತಿದ್ದರೆ, ವಕೀಲರ ಕಪ್ಪು ಕೋಟ್ ಶಿಸ್ತು ಮತ್ತು ನ್ಯಾಯವನ್ನು ಪ್ರತಿನಿಧಿಸುತ್ತದೆ. ಎರಡು ವೃತ್ತಿಗಳಲ್ಲಿಯೂ ಈ ಬಣ್ಣಗಳು ಅವರ ಕರ್ತವ್ಯದ ಮಹತ್ವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!