ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್‌ಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ತೀರ್ಮಾನ ಕುರಿತಂತೆ ಸಾರ್ವಜನಿಕವಾಗಿ ವಿರೋಧಗಳು ಹಾಗೂ ಟೀಕೆಗಳೂ ಶುರುವಾಗಿದ್ದು, ಅದಕ್ಕಾಗಿ ರಾಜ್ಯ ಕೈಗಾರಿಕಾ ಸಚಿವ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ನಾಡಿನ ಹೆಮ್ಮೆಯ ಸೋಪ್ ಬ್ರ್ಯಾಂಡ್ ಆಗಿರುವ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಾಗತಿಕ ಮಟ್ಟದ ಒಂದು ಬ್ರ್ಯಾಂಡ್ ಆಗಿ ಮಾಡುವ ಇಚ್ಛಾಶಕ್ತಿಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲು ನಟಿ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಮ್ಮ ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಮಟ್ಟಕ್ಕೆ ಮಾರುಕಟ್ಟೆ ವಿಸ್ತರಣೆ ಮಾಡುವ ದೃಷ್ಟಿಯಿಂದ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಗೆ 4 ಪ್ರಮುಖ ಕಾರಣಗಳೂ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಎಂಬಿ ಪಾಟೀಲ್ ಅವರು ತಮ್ಮ ಟ್ವೀಟ್‌ನಲ್ಲಿ ಈ ಆಯ್ಕೆ ಯಾವುದೆ ಆತುರದಲ್ಲದೇ, ವಿವಿಧ ಮಾರ್ಕೆಟಿಂಗ್ ತಜ್ಞರ ಜೊತೆ ಚರ್ಚಿಸಿ ಕೈಗೊಂಡ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.
ತಮನ್ನಾ ಭಾಟಿಯಾ ಯಾವುದೇ ಪ್ರಾದೇಶಿಕ ಅಥವಾ ಭಾಷಾ ವರ್ಗಕ್ಕೆ ಸೀಮಿತವಾಗಿಲ್ಲದ ವ್ಯಕ್ತಿತ್ವ ಹೊಂದಿದ್ದಾರೆ. ಬಹುಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದು, ರಾಷ್ಟ್ರವ್ಯಾಪಿ ನಮ್ಮ ಸೋಪು ಮಾರ್ಕೆಟಿಂಗ್ ಮಾಡಲು ಸೂಕ್ತವಾದ ಆಯ್ಕೆ ಆಗಿದ್ದಾರೆ.
ತಮನ್ನಾ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದು, ಬ್ರಾಂಡ್ ಜಾಹೀರಾತಿಗೆ ಸಹಕಾರಿ ಆಗಲಿದೆ. ಸಾಮಾಜಿಕ ಜಾಲತಾಣದ ಮೂಲಕವೂ ನಮಗೆ ಮಾರುಕಟ್ಟೆ ಸಿಗಲಿದೆ. ಅದೇ ರೀತಿ ತಮನ್ನಾರ ಪ್ರಭಾವ ವ್ಯಾಪಕವಾಗಿರುವುದರಿಂದ, ಮೈಸೂರು ಸ್ಯಾಂಡಲ್ ಉತ್ಪನ್ನಗಳು ಕರ್ನಾಟಕದಾಚೆಯ ಮಾರುಕಟ್ಟೆಗೆ ತಲುಪುವುದು ಸುಲಭವಾಗಲಿದೆ ಎಂದು ಹೇಳಿದ್ದಾರೆ.
ಸಚಿವರು ತಮ್ಮ ಟ್ವೀಟ್‌ನಲ್ಲಿ ಮೈಸೂರು ಸ್ಯಾಂಡಲ್ ಸೋಪಿನ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದು, ‘ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕದೊಳಗಿನ ಅತ್ಯುತ್ತಮ ಬ್ರಾಂಡ್ ಆಗಿದ್ದು, ಈಗ ಅದರ ಗುರಿ ರಾಜ್ಯದಾಚೆಯ ಮಾರುಕಟ್ಟೆಗೆ ತಲುಪುವುದು’ ಎಂದು ಉಲ್ಲೇಖಿಸಿದ್ದಾರೆ. ಕೆಎಸ್‌ಡಿಎಲ್ (ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್) ಸಂಸ್ಥೆಯು ಸರ್ಕಾರಿ ಮಾಲೀಕತ್ವದ ಸೋಪು ಮುಂಬರುವ ವರ್ಷಗಳಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಲು ಧೃಡ ಸಂಕಲ್ಪ ಮಾಡಿದೆ. ‘2028ರ ವೇಳೆಗೆ ವಾರ್ಷಿಕ ₹5000 ಕೋಟಿ ಆದಾಯ ತಲುಪಿಸುವುದು ನಮ್ಮ ದೃಷ್ಟಿಯಾಗಿದೆ’ ಎಂದು ಅವರು ಹೇಳಿದ್ದಾರೆ.