ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ರಾತ್ರೋರಾತ್ರಿ ಪಾಕ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಪಹಲ್ಗಾಮ್ ದಾಳಿಗೆ ರಿವೇಂಜ್ ಎನ್ನುವಂತೆ ಭಾರತ ಆಪರೇಷನ್ ಸಿಂಧೂರ ಆರಂಭಿಸಿದೆ.
ಈ ಆಪರೇಷನ್‌ಗೆ ಆಪರೇಷನ್ ಸಿಂಧೂರ ಎಂದು ಹೆಸರಿಟ್ಟಿದ್ದು ಯಾಕೆ? ಇಲ್ಲಿದೆ ಡೀಟೇಲ್ಸ್..
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಭಾರತೀಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದಿದ್ದರು. ದಾಳಿ ವೇಳೆ ನೀನು ಹಿಂದೂನಾ? ಮುಸಲ್ಮಾನನಾ? ಎಂದು ಕೇಳಿ ಕೇಳಿ ಹಿಂದೂಗಳ ಮೇಲೆ ಮಾತ್ರವೇ ಗುಂಡು ಹಾರಿಸಿದ್ದರು ಎನ್ನಲಾಗಿತ್ತು. ಅಲ್ಲದೆ ಪ್ರವಾಸಿಗರ ಪೈಕಿ ಹಲವು ದಂಪತಿಗಳಿದ್ದರು. ಇದರಲ್ಲಿ ಪುರುಷರ ಮೇಲೆ ಹೆಚ್ಚಾಗಿ ಫೈರಿಂಗ್ ಮಾಡಿ ಅವರ ಪತ್ನಿಯರನ್ನು ಏನೂ ಮಾಡದೆ ಬಿಟ್ಟಿದ್ದರು.
ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯೊಂದು ಕೂಡ ಪೆಹಲ್ಗಾಮ್‌ಗೆ ತೆರಳಿತ್ತು. ಪತ್ನಿಯ ಮುಂದೆಯೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಪತಿಯ ಮೃತದೇಹದ ಮುಂದೆ ಕುಳಿತು ಪತ್ನಿ ಅಳುತ್ತಿದ್ದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಮನಕಲಕುವಂತಿತ್ತು.
ದಾಳಿಯಲ್ಲಿ ಪತಿಯರನ್ನು ಕೊಂದು ಪತ್ನಿಯರ ಸಿಂಧೂರ (ಕುಂಕುಮ) ಕಸಿದಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿಗೆ ʼಆಪರೇಷನ್ ಸಿಂಧೂರʼ ಎಂದು ಹೆಸರಿಡಲಾಗಿದೆ. ಭಾರತೀಯ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿದ ಒಂಬತ್ತು ಗುರಿಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿ ಮತ್ತು ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ ಪಾಕಿಸ್ತಾನದ ಬಹಾವಲ್ಪುರ್, ಮುರಿಡ್ಕೆ ಮತ್ತು ಸಿಯಾಲ್ಕೋಟ್ ಪ್ರದೇಶಗಳಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಲು ವಿಶೇಷ ಯುದ್ಧಸಾಮಗ್ರಿಗಳನ್ನು ಬಳಸಲಾಗಿದೆ.