ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಕೊಲೆ ಮಾಡಿದ್ಯಾಕೆ ಎಂದು ಆರೋಪಿಗಳು ಕಡೆಗೂ ಬಾಯ್ಬಿಟ್ಟಿದ್ದಾರೆ.
ರೂಂನಿಂದ ಏಕಾಏಕಿ ಮುನಿಗಳು ಕಾಣೆಯಾಗಿದ್ದು,ತದನಂತರ ಅವರ ಹತ್ಯೆಯಾದ ವಿಚಾರ ಬೆಳಕಿಗೆ ಬಂದಿತ್ತು. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಸತ್ಯ ಬಾಯ್ಬಿಡಿಸಿದಾಗ ನಾವೇ ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದರು. ಆದರೆ ಮೃತದೇಹ ಎಲ್ಲಿದೆ? ಯಾಕಾಗಿ ಕೊಲೆ ಮಾಡಿದ್ದೇವೆ ಎನ್ನುವ ಬಗ್ಗೆ ಗೊಂದಲದ ಹೇಳಿಕೆಗಳನ್ನು ನೀಡಿದ್ದರು.
ಇದೀಗ ಸತ್ಯ ಹೊರಬಂದಿದ್ದು, ಕೊಲೆಗಡುಕರು ಮುನಿಗಳಿಗೆ ಆಪ್ತರಾಗಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ, ಇವರ‍್ಯಾರೋ ಅಪರಿಚಿತರಲ್ಲ, ಅದೇ ಗ್ರಾಮದವರಾಗಿದ್ದು, ಮುನಿಗಳ ಜೊತೆ ಉತ್ತಮ ಒಡೆನಾಟ ಹೊಂದಿದ್ದರು. ಜೈನಮುನಿಗಳು ಇವರ ಮೇಲೆ ಸಾಕಷ್ಟು ವಿಶ್ವಾಸ ಇಟ್ಟಿದ್ದು, ಇವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಕಾಲಕ್ರಮೇಣ ಆ ಹಣವನ್ನು ವಾಪಾಸ್ ಮಾಡುವಂತೆ ಹೇಳಿದಾಗ ಆರೋಪಿಗಳು ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ದುಡ್ಡು ಕೊಡಲಾಗದೇ ಮುನಿಗಳನ್ನೇ ಮರ್ಡರ್ ಮಾಡುವ ಪ್ಲ್ಯಾನ್ ಮಾಡಿದ್ದರು.
ಇನ್ನೊಂದು ಆಘಾತಕಾರಿ ವಿಷಯವೆಂದರೆ ಆರೋಪಿಗಳು ಜೈನಮುನಿಯನ್ನು ಆಶ್ರಮದಲ್ಲಿಯೇ ಕೊಂದಿದ್ದರು, ತದನಂತರ ಸಂಬಂಧಿಕರ ಗದ್ದೆಯ ಕೊಳವೆಬಾಯಿಯಲ್ಲಿ ಮೃತದೇಹವನ್ನು ಎಸೆದಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಇನ್ನೂ ಜೈನಮುನಿಗಳ ಮೃತದೇಹ ಸಿಕ್ಕಿಲ್ಲ.
ಇತ್ತ ಆಶ್ರಮದಲ್ಲಿ ಭಕ್ತಾದಿಗಳು ಕಣ್ಣೀರಿಡುತ್ತಿದ್ದು, ನೀರವ ಮೌನ ಆವರಿಸಿದೆ, ಜೈನಮುನಿಗಳನ್ನು ಕೊಂದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.