ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ: ರೆಡ್ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯಾದ್ಯಂತ ಮಳೆಯಅಬ್ಬರ ಮುಂದುವರಿದಿದೆ. ಉತ್ತರ ಒಳನಾಡು, ಕರಾವಳಿ ಸೇರಿ ಮಲೆನಾಡು ಭಾಗದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ವಿವಿಧ ಗ್ರಾಮದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ವಾಸದ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ಮಳೆ ನೀರು ಹರಿದು ಹೋಗುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಳೆ ವ್ಯಾಪಾಕವಾಗುತ್ತಿರುವುದರಿಂದ ಕಡಲು ಕೂಡ ಮತ್ತಷ್ಟು ಪ್ರಕ್ಷುಬ್ಧಗೊಂಡಿದ್ದು, ಕಡಲಿನ ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಇದರಿಂದ ಕಡಲ ತಡಿಯ ಜನರಲ್ಲಿ ಆತಂಕ ಹೆಚ್ಚಿಸಿದೆ.

ಮುಂದಿನ ದಿನಗಳಲ್ಲಿ ಕಡಲ್ಕೊರೆತದ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ದೇವರ ಮೊರೆ ಹೊಕ್ಕಿದ್ದಾರೆ.

ಮುಂದಿನ 5 ದಿನ ಭಾರೀ ಮಳೆ
ದಕ್ಷಿಣ ಭಾರತದಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನಲ್ಲಿ ಗುಡುಗು-ಮಿಂಚು ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಈ ಮಳೆ ಮುಂದಿನ 5 ದಿನಗಳ ಕಾಲ ಮುಂದುವೆರೆಯಲಿದೆ ಎಂದು ಎಚ್ಚರಿಕೆ ನೀಡಿದೆ.

ಬಾಗಲಕೋಟೆ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ದಕ್ಷಿಣ ಕನ್ನಡ, ಗುಲ್ಬರ್ಗ, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು ಮತ್ತು ನಾಳೆ ಅಂದರೆ ಜೂನ್‌ 8 ಮತ್ತು 9 ರಂದು ಭಾರೀ ಮಳೆ ಹಿನ್ನೆಲೆ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತುಬ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!