ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅಮೆರಿಕದ ಭಾಷಣದಲ್ಲಿ ಹಾಕಿದ ಪರಮಾಣು ಬೆದರಿಕೆಯನ್ನು ಭಾರತ ಖಂಡಿಸಿದೆ.
ಫ್ಲೋರಿಡಾದಲ್ಲಿ ತಮ್ಮ ಭಾಷಣದ ಸಮಯದಲ್ಲಿ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪರಮಾಣು ಯುದ್ಧದ ಬೆದರಿಕೆಗಳನ್ನು ಹಾಕಿದ್ದರು. ಭಾರತದೊಂದಿಗೆ ಮುಂದಿನ ದಿನಗಳಲ್ಲಿ ಸಂಘರ್ಷ ಹೆಚ್ಚಾಗಿ ಒಂದುವೇಳೆ ಪಾಕಿಸ್ತಾನ ತನ್ನ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸಿದರೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ ಎಂದು ಅಸಿಮ್ ಮುನೀರ್ ಬೆದರಿಕೆ ಹಾಕಿದ್ದರು.
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆ ನೀಡಿದ್ದು, ‘ಅಮೆರಿಕಾ ಭೇಟಿಯಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥರು ನೀಡಿರುವ ಹೇಳಿಕೆಗಳ ಬಗ್ಗೆ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿರುವ ಸುದ್ದಿಗಳು ನಮ್ಮ ಗಮನಕ್ಕೆ ಬಂದಿದೆ. ಪರಮಾಣು ಕತ್ತಿಯನ್ನು ಝಳಪಿಸುವುದು ಪಾಕಿಸ್ತಾನದ ಹಳೆಯ ಬುದ್ಧಿ’ ಎಂದು ಕಿಡಿಕಾರಿದೆ.
ಈ ಹೇಳಿಕೆಗಳನ್ನು ಭಾರತದೊಂದಿಗೆ ಸ್ನೇಹಪರವಾಗಿರುವ ಮೂರನೇ ದೇಶದ ನೆಲದಿಂದ ಮಾಡಿರುವುದು ವಿಷಾದಕರ. ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ಮುಂದುವರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಮುನೀರ್ ಅವರ ಅಮೆರಿಕ ನೆಲದಿಂದ ಬಂದ ಪರಮಾಣು ಬೆದರಿಕೆಯು ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬೇಜವಾಬ್ದಾರಿ ರಾಷ್ಟ್ರ ಎಂದು ಸಾಬೀತುಪಡಿಸಿದೆ. ಪಾಕಿಸ್ತಾನದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ರಾಷ್ಟ್ರೇತರ ವ್ಯಕ್ತಿಗಳ ಕೈಗೆ ಸಿಗುವ ನಿಜವಾದ ಅಪಾಯವಿದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿಲ್ಲ. ಆ ದೇಶವನ್ನು ನಿಯಂತ್ರಿಸುವುದು ಅವರ ಮಿಲಿಟರಿಯೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.