ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ದೆಹಲಿಗೆ ತರಲಾಯಿತು, ಅವರ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸುವಾಗ ಪತ್ನಿ ಹಿಮಾಂಶಿ ನರ್ವಾಲ್ ಕಣ್ಣೀರು ಹಾಕುತ್ತಾ, ಭಾವುಕ ವಿದಾಯ ನೀಡಿದ್ದಾರೆ.
ವಿನಯ್ ಬಹಳ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಮುಕ್ತಿ ಸಿಗಲಿ. ಅವರ ಬಗ್ಗೆ ಪ್ರತಿದಿನವೂ ನಾವು ಹೆಮ್ಮೆ ಪಡುತ್ತೇವೆ ಎಂದು ಹಿಮಾಂಶಿ ಭಾವುಕರಾಗಿ ಪತಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ನಂತರ ಅವರ ಪಾರ್ಥೀವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ಹರಿಯಾಣದ ಕರ್ನಾಲ್ನಲ್ಲಿರುವ ಅವರ ಹುಟ್ಟೂರಿಗೆ ಕಳುಹಿಸಲಾಯಿತು. ದುಃಖಿತ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಕೂಡ ಜಮಾಯಿಸಿ ಯೋಧನಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಅವರು ಕೂಡ ಅಂತಿಮ ನಮನ ಸಲ್ಲಿಸಲು ಸಮಾರಂಭದಲ್ಲಿ ಹಾಜರಿದ್ದರು.