June 29, 2026
Monday, June 29, 2026
spot_img

ಸಂಶಯದ ಭೂತಕ್ಕೆ ಬಲಿಯಾದ ಪತ್ನಿ: ಕೊಡಲಿಯಿಂದ ಕೊಚ್ಚಿ ಕೊಂ*ದ ಪಾಪಿ ಪತಿ ಅಂದರ್

ಹೊಸದಿಗಂತ ವರದಿ ಬೆಳಗಾವಿ :

ಸಂಶಯದ ಭೂತಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹೆಂಡತಿಯ ನಡತೆಯ ಮೇಲೆ ಶಂಕೆ ವ್ಯಕ್ತಪಡಿಸಿ, ಪತಿಯೇ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.

ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಶ್ರೀ ಅವಜೀಕರ ಮಠದಲ್ಲಿ ಈ ನೆತ್ತರ ಹರವು ನಡೆದಿದೆ. ಶೋಭಾ ಪರಗೊಂಡ ಸಾರವಾಡ (35) ಕೊಲೆಯಾದ ದುರ್ದೈವಿ ಮಹಿಳೆ.

ಆರೋಪಿ ಪತಿ ಪರಗೊಂಡ ಸಂಗಪ್ಪ ಸಾರವಾಡ ಎಂಬಾತನೇ ಹೆಂಡತಿಯನ್ನು ಕೊಂದ ಹಂತಕ.

4 ವರ್ಷಗಳ ಸಂಶಯ, ನಸುಕಿನ ಜಾವ ಅಂತ್ಯ:

ಆರೋಪಿ ಪರಗೊಂಡ ಕಳೆದ ನಾಲ್ಕು ವರ್ಷಗಳಿಂದಲೂ ತನ್ನ ಹೆಂಡತಿ ಶೋಭಾಳ ನಡತೆಯ ಬಗ್ಗೆ ವಿನಾಕಾರಣ ಸಂಶಯ ಪಡುತ್ತಿದ್ದನು. ಈ ವಿಷಯವಾಗಿ ಕುಟುಂಬದ ಹಿರಿಯರು ಹಲವು ಬಾರಿ ಜಗಳ ಬಿಡಿಸಿ, ಆರೋಪಿಗೆ ಬುದ್ಧಿವಾದ ಹೇಳಿದ್ದರೂ ಆತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ.

ಜೂನ್ 28 ರ ಭಾನುವಾರ ನಸುಕಿನ ಜಾವ ಸುಮಾರು 5 ಗಂಟೆಯ ವೇಳೆಗೆ, ಶೋಭಾ ಅವರು ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ ಸಂಶಯದ ಮದವೇರಿದ ಪತಿ ಪರಗೊಂಡ, ಕೊಡಲಿ ತೆಗೆದುಕೊಂಡು ಆಕೆಯ ಕುತ್ತಿಗೆ ಹಾಗೂ ಕೈಗಳಿಗೆ ಮನಸೋಇಚ್ಛೆ ಕೊಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಶೋಭಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:

ಘಟನೆ ನಡೆದ ಬಳಿಕ ಮೃತ ಮಹಿಳೆಯ ಸಹೋದರ ಮಹಾಂತೇಶ ಗುರಪ್ಪ ಪಾಟೀಲ ಅವರು ಅಥಣಿ ಪೊಲೀಸ್ ಠಾಣೆಗೆ ಧಾವಿಸಿ ತಂಗಿಯ ಕೊಲೆಯ ಕುರಿತು ದೂರು ನೀಡಿದ್ದಾರೆ. ಸದ್ಯ ಸಹೋದರನ ದೂರಿನ ಅನ್ವಯ ಅಥಣಿ ಠಾಣೆಯ ಪೊಲೀಸರು ಅಪರಾಧ ಸಂಖ್ಯೆ: 460/2026 ರಂತೆ, ಹೊಸ ಕಾನೂನು ಕಲಂ 103(1) ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತೆ) ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ಪ್ರಕರಣ ದಾಖಲಾದ ತಕ್ಷಣವೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ,” ಎಂದು ಎಸ್ಪಿ ಕೆ. ರಾಮರಾಜನ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !