Tuesday, November 18, 2025

ಪತ್ನಿ ಮೈಮೇಲೆ ಗಾಯದ ಗುರುತು, ಬಳೆಗಳು ಪುಡಿ ಪುಡಿ; ಪತಿ ವಿರುದ್ಧವೇ ಕೊಲೆ ಆರೋಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, 28 ವರ್ಷದ ವಿವಾಹಿತ ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಎಡ್ವಿನ್ ಎಂದು ಗುರುತಿಸಲಾಗಿದೆ.

ಘಟನೆ ಸಂಬಂಧ ಮೃತಳ ಪೋಷಕರು ಗಂಡನ ಮೇಲೆಯೇ ಗಂಭೀರ ಆರೋಪ ಮಾಡಿದ್ದು, ಪತಿಯೇ ತಮ್ಮ ಮಗಳನ್ನು ಹತ್ಯೆಗೈದಿದ್ದಾನೆ ಎಂದು ದೂರಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಎಡ್ವಿನ್ ಮತ್ತು ಆಕೆಯ ಪತಿಯ ನಡುವೆ ಹಣಕಾಸಿನ ವಿಷಯವಾಗಿ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ಜಗಳದ ಹಿನ್ನೆಲೆಯಲ್ಲಿ ಪತಿಯು ಎಡ್ವಿನ್‌ ಅವರನ್ನು ಕೊಲೆ ಮಾಡಿ ನೇಣು ಬಿಗಿದಂತೆ ಬಿಂಬಿಸಿರುವ ಸಾಧ್ಯತೆ ಇದೆ ಎಂದು ಪೋಷಕರು ಆರೋಪಿಸಿದ್ದಾರೆ.

ಗಾಯದ ಗುರುತುಗಳು ಪತ್ತೆ:

ಈ ಆರೋಪಕ್ಕೆ ಪುಷ್ಠಿ ನೀಡುವಂತೆ, ಎಡ್ವಿನ್ ಅವರ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಅವರ ಕೈ ಬಳೆಗಳು ಸಂಪೂರ್ಣವಾಗಿ ಪುಡಿ ಪುಡಿಯಾಗಿರುವುದು ಕಂಡುಬಂದಿದೆ. ಇದು ಸಾವಿಗೂ ಮುನ್ನ ನಡೆದ ಹೋರಾಟದ ಲಕ್ಷಣಗಳನ್ನು ಸೂಚಿಸುತ್ತದೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪ್ರಕರಣದ ಕುರಿತು ರಾಜಗೋಪಾಲ ನಗರ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

error: Content is protected !!