March 22, 2026
Sunday, March 22, 2026
spot_img

ಪತಿ ಮೃತಪಟ್ಟ ಕೆಲವೇ ದಿನಕ್ಕೆ ಮತ್ತೊಂದು ಮದುವೆಯಾದ ಪತ್ನಿ! ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪತ್ನಿಯೊಬ್ಬಳು ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಇನ್ನೊಂದು ಮದುವೆಯಾಗಿದ್ದಾಳೆ. ಇದರಿಂದ ಸಾಕಷ್ಟು ಅನುಮಾನಗಳು ಕಾಡಿದ್ದು, ಮೃತದೇಹವನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ತುಮಕೂರಿನ ದಾಸರಹಳ್ಳಿಯಲ್ಲಿ ಈ ಅನುಮಾನಾಸ್ಪದ ಘಟನೆ ನಡೆದಿದೆ. ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ದಾಸರಹಳ್ಳಿಯ ಐವತ್ತು ವರ್ಷದ ಪರಮೇಶ್‌ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರನ್ನು ಸಮಾಧಿ ಮಾಡಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಪತ್ನಿ ಮರುಮದುವೆ ಆಗಿದ್ದರು. ಇದು ಮೃತನ ಸಂಬಂಧಿಕರಲ್ಲಿ ಅನುಮಾನ ಮೂಡಲು ಕಾರಣವಾಗಿತ್ತು.

ಮೃತನ ಸಹೋದರಿಗೆ ತನ್ನ ಅಣ್ಣನಿಗೆ ಹೃದಯಾಘಾತವಾಗಿಲ್ಲ ಎನ್ನಿಸಿತ್ತು. ಮೃತಪಟ್ಟ ಸಂದರ್ಭದಲ್ಲಿ ಮೂಗಿನ ಪಕ್ಕದಲ್ಲಿ ಗಾಯ ಇತ್ತು, ಜತೆಗೆ ಗುಪ್ತಾಂಗ ಊದಿಕೊಂಡಿತ್ತು. ಇದೆಲ್ಲವನ್ನೂ ಪರಿಗಣಿಸಿ ದೂರು ನೀಡಲಾಗಿದೆ.

ದೂರು ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಹಸೀಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !