ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಿಧವೆಯೊಬ್ಬರು ಏರ್ ಇಂಡಿಯಾ ವಿಮಾನ ಸಂಸ್ಥೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ತನ್ನ ಕುಟುಂಬ ಸಮೇತ ಪ್ರತಿಭಟನೆ ನಡೆಸಿದ್ದು, ಕಂಪನಿಯು ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೇರಳದ ಏರ್ ಇಂಡಿಯಾ ಕಚೇರಿಯ ಮುಂದೆ ಪತಿಯ ಶವವನ್ನು ಇಟ್ಟು ಮಹಿಳೆ ಧರಣಿ ನಡೆಸುತ್ತಿದ್ದಾರೆ. ಏರ್ ಇಂಡಿಯಾ ಟಿಕೆಟ್ ರದ್ದು ಮಾಡಿದ್ದರಿಂದ, ಒಮನ್ನಲ್ಲಿ ತನ್ನ ಪತಿಯ ಸಾವಿಗೂ ಮುನ್ನ ಕೊನೆಯ ಬಾರಿಗೆ ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇತ್ತೀಚೆಗೆ ಏರ್ ಇಂಡಿಯಾ ಸಿಬ್ಬಂದಿಯು ಮುಷ್ಕರ ಹಮ್ಮಿಕೊಂಡಿದ್ದರು. ಇದೇ ವೇಳೆ ಒಮನ್ನಲ್ಲಿ ಕೇರಳದ ವ್ಯಕ್ತಿ ಹೃದಯಾಘಾತಕ್ಕೀಡಾಗಿದ್ದರು. ಅವರನ್ನು ಕಾಣಲು ಹೊರಟಿದ್ದ ಪತ್ನಿಯ ಪ್ರಯಾಣವು ಮುಷ್ಕರದಿಂದಾಗಿ ರದ್ದಾಗಿತ್ತು. ಬಳಿಕ ಇನ್ನೊಂದು ಬಾರಿ ಟಿಕೆಟ್ ಬುಕ್ ಮಾಡಿದಾಗಲೂ ಮತ್ತೆ ಅದು ರದ್ದಾಗಿತ್ತು. ದುರಂತವೆಂದರೆ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತಿಯನ್ನು ಕೊನೆಯ ಬಾರಿಗೆ ನೋಡಲು ಬಯಸಿದ್ದ ಪತ್ನಿಯ ಟಿಕೆಟ್ ಅನ್ನು ಎರಡು ಬಾರಿ ರದ್ದು ಮಾಡಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ರದ್ದು ಮಾಡಿದ್ದರಿಂದ ತಾವು ಒಮನ್ಗೆ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ದುರಂತ ಸಂಭವಿಸಿದೆ. ಇದು ವಿಮಾನಯಾನದಿಂದಾದ ಎಡವಟ್ಟು ಎಂದು ಆರೋಪಿಸಿ ಮಹಿಳೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಏರ್‌ಲೈನ್ಸ್‌ನ ಅಸಡ್ಡೆಯಿಂದ ತನ್ನ ಅಳಿಯನನ್ನು ಕಳೆದುಕೊಳ್ಳಬೇಕಾಗಿ ಬಂತು ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ. ಏರ್‌ಲೈನ್ಸ್ ಕಚೇರಿಯ ಮುಖ್ಯ ಬಾಗಿಲಿನ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ಅವರು, ಏರ್ ಇಂಡಿಯಾ ನಿರ್ಧಾರ ತೆಗೆದುಕೊಳ್ಳುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.