ಹೊಸದಿಗಂತ ವರದಿ, ಸೋಮವಾರಪೇಟೆ:
ಕಾಡು ಪ್ರಾಣಿಯನ್ನು ಬೇಟೆಯಾಡಿ ಮಾಂಸ ಮಾಡಿ ಅದನ್ನು ಸ್ನಾನದ ಮನೆಯಲ್ಲಿ ಬಚ್ಚಿಟ್ಟಿರುವುದನ್ನು ಪತ್ತೆ ಮಾಡಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು, ಮೂರೂವರೆ ಕೆ.ಜಿ. ಮಾಂಸ, ಬೇಟೆಯಾಡಲು ಬಳಸಿದ ಕೋವಿ, ಉಪಯೋಗಿಸಿದ ಕಾಡತೂಸು ಹಾಗೂ ಬಿಳಿ ಬಣ್ಣದ ಪ್ಲಾಸ್ಟಿಕ್ ಬಕೆಟ್‌ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.
ಭಾನುವಾರ ಅಪರಾಹ್ನ 12 ಗಂಟೆ ಸಮಯದಲ್ಲಿ ಸೋಮವಾರಪೇಟೆ ವಲಯ ವ್ಯಾಪ್ತಿಯ ಬಾಣವಾರ ಶಾಖೆಯ ಚಿಕ್ಕಳುವಾರ ಗ್ರಾಮದ ನಿವಾಸಿ ಎ.ಕೆ.ಸುಂದರ ಎಂಬವರ ಮನೆಗೆ ದಾಳಿ ನಡೆಸಿದ ಬಾಣಾವಾರ ಶಾಖೆಯ ಉಪ ವಲಯ ಅರಣ್ಯಧಿಕಾರಿ ಹಾಗೂ ಸಿಬ್ಬಂದಿಗಳು, ಕಾಡು ಪ್ರಾಣಿಯನ್ನು ಬೇಟೆಯಾಡಿ ಮಾಂಸ ಮಾಡಿ ಸ್ನಾನದ ಮನೆಯಲ್ಲಿ ಬಚ್ಚಿಟ್ಟಿರುವುದನ್ನು ಪತ್ತೆ ಹಚ್ಚಿ ಅದನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸುಂದರ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಅರಣ್ಯಾಧಿಕಾರಿ ಚೇತನ್, ಬಾಣಾವಾರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಾಕೇಶ್, ಗಸ್ತು ಅರಣ್ಯ ಪಾಲಕರಾದ ಪ್ರಸಾದ್ ಕುಮಾರ್, ಸದಾನಂದ ಹಿಪ್ಪರಗಿ ಮತ್ತು ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.