ಮನೆ ಬಳಿ‌ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ

ಹೊಸದಿಗಂತ ವರದಿ,ಮಡಿಕೇರಿ:

ಮನೆಯ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿ ಹಾನಿಗೊಳಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.
ಮುಂಜಾನೆ ವೇಳೆ ದಟ್ಟ ಮಂಜಿನ ವಾತಾವರಣದಲ್ಲಿ ಗ್ರಾಮದ ನಿವಾಸಿ ಶ್ರೀಧರ ಅವರ ಪುತ್ರ ಕುಶ ಎಂಬವರಿಗೆ ಸೇರಿದ ಕಾರಿನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಕಾರು ಜಖಂಗೊಂಡಿದೆ.
ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಕಾಫಿ ತೋಟ ಸೇರಿದಂತೆ ಕೃಷಿ ಭೂಮಿಗಳನ್ನು ಧ್ವಂಸ ಮಾಡಿದೆ. ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ಬೃಹತ್ ಕಂದಕ ನಿರ್ಮಾಣ ಮಾಡುತ್ತಿದೆ. ಆದರೆ ಅರಣ್ಯದಿಂದ ಗ್ರಾಮಕ್ಕೆ ಬಂದಿರುವ ಕಾಡಾನೆಗಳನ್ನು ಕಾಡಿಗಟ್ಟದೆ ಕಂದಕ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕ ಕ್ರಮ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಆತಂಕದ ವಾತಾವರಣ ಮುಂದುವರೆದಿದ್ದು, ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!