ಹೊಸ ದಿಗಂತ ವರದಿ, ತುಮಕೂರು :
ಕುಣಿಗಲ್, ಕಾಡು ಹಂದಿಗಳನ್ನು ಬೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ಸಿಡಿದು ಕಾಡುಹಂದಿ ಸಾವನ್ನಪ್ಪಿದ್ದಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಬೈಕ್ ಕೂಡ ಡ್ಯಾಮೇಜ್ ಆಗಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಂಗಿಕೊಪ್ಪಲು ಬಳಿ ಇರುವ ಶೃಂಗಾರ ಸಾಗರ ಗ್ರಾಮದ ಜಮೀನೊಂದರಲ್ಲಿ ನಾಗಮಂಗಲ ತಾಲೂಕಿನ ಶಂಕರ್ ನಾಗ್ ಮತ್ತು ಇಬ್ಬರು ಅಪ್ರಾಪ್ತರು ಸೇರಿ ಸೋಮವಾರ ರಾತ್ರಿ ಕಾಡುಹಂದಿ ಬೇಟೆಯಾಡಲು ನಾಡ ಬಾಂಬ್ ಗಳನ್ನು ಇಟ್ಟಿದ್ದರು. ಆಹಾರ ಅರಸಿ ಬಂದ ಕಾಡು ಹಂದಿಗಳು ಆಹಾರವೆಂದು ಭಾವಿಸಿ ತಿನ್ನಲು ಹೋಗಿ ಕಾಡು ಹಂದಿಯೊಂದು ನಾಡ ಬೊಂಬ್ ಗೆ ಬಲಿಯಾಗಿದೆ. ನಾಡ ಬಾಂಬ್ ನ ಶಬ್ದ ಕೇಳಿ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದಾಗ ಸಿಬ್ಬಂದಿಗಳ ದ್ವಿಚಕ್ರವಾಹನ ಬಾಂಬ್ ಮೇಲೆ ಹರಿದಾಗ ಬಾಂಬ್ ಸಿಡಿದು ಹಿಂಭಾಗದ ಚಕ್ರ ಡ್ಯಾಮೇಜ್ ಆಗಿದ್ದು, ಅರಣ್ಯ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೂ ಡಿ, ಆರ್, ಎಫ್,ಒ.ಮಾದೇಶ್ ಮತ್ತು ಗಸ್ತು ಅರಣ್ಯ ಪಾಲಕ ಶಿವರಾಜ್ ಎದೆಗುಂದದೆ ಸ್ಥಳದಲ್ಲಿ ಕ್ಯಾಮರಾ ಅಳವಡಿಸಿ ಬೆಳಗಿನ ಜಾವ ಕಾಡು ಹಂದಿ ಕಳ್ಳರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಿಗ್ಗೆ ಅರಣ್ಯಾಧಿಕಾರಿಗಳು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಅಮೃತೂರು ಸರ್ಕಲ್ ಇನ್ಸ್‌ಪೆಕ್ಟರ್ ಮಾಧ್ಯ ನಾಯಕ್, ಪಿಎಸ್ಐ ಪ್ರಶಾಂತ್, ಹುಲಿಯೂರುದುರ್ಗ ಅರಣ್ಯಾ ಧಿಕಾರಿ ಜಗದೀಶ್, ಮತ್ತು ಬಾಂಬ್ ನಿಷ್ಕೀಯ ದಳದ ಸಿಬ್ಬಂದಿ ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿನೆ ನಡೆಸಿ ಕಾಡು ಹಂದಿಗಳನ್ನ ಬೇಟೆಯಾಡಲು ತಂದಿದ್ದ 25ಕ್ಕೂ ಹೆಚ್ಚು ನಾಡ ಬಾಂಬ್ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.