ಹೊಸದಿಗಂತ ವರದಿ, ಮಂಡ್ಯ :
ಮಂಡ್ಯ ತಾಲೂಕಿನ ತೈಲೂರು ಕೆರೆಯಲ್ಲಿ ಬುಧವಾರ ಮುಂಜಾನೆ ಮೂರು ಕಾಡಾನೆಗಳು ಪ್ರತ್ಯಕ್ಷವಾಗಿವೆ. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಕಬ್ಬಾಳು ಅರಣ್ಯ ಪ್ರದೇಶದಿಂದ ಮೇವು ಅರಸಿ ವಲಸೆ ಬಂದಿರುವ ಎರಡು ಸಲಗ ಮತ್ತು ಒಂದು ಹೆಣ್ಣಾನೆ ತೈಲೂರು ಕೆರೆಯಲ್ಲಿ ಬೀಡು ಬಿಟ್ಟಿವೆ.
ಗ್ರಾಮದ ಜನರು ಕೆರೆಯ ಬಳಿ ತೆರಳಿದಾಗ ಆನೆಗಳ ಹಿಂಡು ಕೆರೆಯಲ್ಲಿ ಜಲಕ್ರೀಡೆಯಾಡುತ್ತಿದ್ದುದು ಕಂಡುಬಂದಿದೆ. ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಕಬ್ಬಾಳು ಅರಣ್ಯ ಪ್ರದೇಶದ ಆನೆಗಳ ಕಾರಿಡಾರ್‌ನಿಂದ ಹೊರಬಂದಿರುವ ಆನೆಗಳು, ಮಾರ್ಗ ಮಧ್ಯೆ ರೈತರ ಕಬ್ಬು, ಬಾಳೆ ಹಾಗೂ ಭತ್ತದ ಬೆಳೆಗಳನ್ನು ನಾಶಪಡಿಸಿ ಅಪಾರ ಪ್ರಮಾಣದ ಹಾನಿಯುಂಟುಮಾಡಿವೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.
ಸ್ಥಳದಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡನ್ನು ಅರಣ್ಯ ಇಲಾಖೆ ಅಧಿಕಾರಿಗಳುಹಾಗೂ ಅರಣ್ಯ ಸಿಬ್ಬಂದಿಗಳು ಸಂಜೆಯ ವೇಳೆಗೆ ಕಾರ್ಯಾಚರಣೆ ನಡೆಸಿ ಗಾಳಿಯಲ್ಲಿ ಗುಂಡು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮತ್ತೆ ಕಾಡಿಗಟ್ಟಲು ಕ್ರಮ ಕೈಗೊಂಡು ಸಿದ್ಧತೆ ನಡೆಸಿದ್ದಾರಾದರೂ, ಧಾರಾಕಾರವಾಗಿ ಮಳೆ ಬೀಳುತ್ತಿರುವ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿದೆ.
ಜಿಲ್ಲಾ ಅರಣ್ಯಾಧಿಕಾರಿ ರುದ್ರನ್, ಸಹಾಯಕ ಅರಣ್ಯಾಧಿಕಾರಿ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಸಹಾಯಕ ಅರಣ್ಯಾಧಿಕಾರಿಗಳಾದ ರವಿ, ರತ್ನಾಕರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಯಲ್ಲಿ ಪಾಲ್ಗೊಂಡಿದ್ದಾರೆ.