ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಾಡಾನೆಯೊಂದು ಜಾರ್ಖಂಡ್ನ ಬರ್ಕಾಕನ ಹಾಗೂ ಹಾಜಿರ್ಬಾಗ್ ರೈಲು ನಿಲ್ದಾಣಗಳ ನಡುವಿನ ಕಾಡು ಪ್ರದೇಶದಲ್ಲಿ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿದ ಪರಿಣಾಮ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಿದ ಅಪರೂಪದ ಘಟನೆ ನಡೆದಿದೆ.
ಕಾಡಿನಿಂದ ಹಳಿ ದಾಟಲು ಬಂದಿದ್ದ ಆನೆಗೆ ಪ್ರಸವ ವೇದನೆ ಶುರುವಾಗಿದೆ. ಹೀಗಾಗಿ ಹಳಿ ಪಕ್ಕದಲ್ಲೇ ಮರಿಗೆ ಜನ್ಮ ನೀಡಲು ಮುಂದಾಗಿದೆ. ಈ ವೇಳೆ ರೈಲು ಕೂಡ ಆಗಮಿಸಿದೆ. ಆದರೆ ಅರಣ್ಯಾಧಿಕಾರಿಗಳ ದಿಟ್ಟ ನಡೆಯಿಂದ ರೈಲನ್ನು ಬರೋಬ್ಬರಿ 2 ಗಂಟೆ ಕಾಲ ನಿಲ್ಲಿಸಿದ ಘಟನೆ ನಡೆದಿದೆ. ಮರಿ ಆನೆಗೆ ಜನ್ಮ ನೀಡಿದ ಬಳಿಕವಷ್ಟೇ ರೈಲು ಸಾಗಿದೆ.
ಸರಿಸುಮಾರು ಮುಂಜಾನೆ 3 ಗಂಟೆ ಸಮಯ. ವೈಗವಾಗಿ ಗೂಡ್ಸ್ ರೈಲು ಬರ್ಕಾಕಾನ ಹಾಗೂ ಹಜರಿಬಾಗ್ ರೈಲು ನಿಲ್ದಾಣಗಳ ನಡುವೆ ಸಾಗಿತ್ತು. ಕಲ್ಲಿದ್ದಲು ತುಂಬಿಕೊಂಡು ರೈಲು ಸಾಗಿತ್ತು. ಆದರೆ ಇದೇ ಕಾಡು ಪ್ರದೇಶದಲ್ಲಿ ಗರ್ಭಿಣಿ ಆನೆ ಪ್ರಸವ ವೇದನೆಯಿಂದ ತಿರುಗಾಡುತ್ತಿರುವುದನ್ನು ಅರಣ್ಯಾಧಿಕಾರಿಗಳು ಗಮಿನಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ತಕ್ಷಣವೇ ಅರಣ್ಯಾಧಿಕಾರಿಗಳು ರೈಲು ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಈ ರೈಲು ಹಳಿ ಮೂಲಕ ಸಾಗುವ ರೈಲನ್ನು ನಿಲ್ಲಿಸಲು ಸೂಚಿಸಿದ್ದಾರೆ. ರೈಲು ಹಳಿ ಪಕ್ಕದಲ್ಲೇ ಹೆಣ್ಣಾನೆ,ಮರಿಗೆ ಜನ್ಮ ನೀಡಲಿದೆ. ಹೀಗಾಗಿ ರೈಲು ಸಾಗಿದರೆ ಸಮಸ್ಯೆ ಹೆಚ್ಚಾಗಲಿದೆ. ಇದರಿಂದ ಆನೆ ಹಾಗೂ ಗರ್ಭದಲ್ಲಿರುವ ಮರಿ ಆನೆಗೂ ಸಮಸ್ಯೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಗೂಡ್ಸ್ ರೈಲಿಗೆ ಮಾಹಿತಿ ನೀಡಿದ್ದಾರೆ.
ಗರ್ಭಿಣಿ ಆನೆ ಪ್ರಸವ ವೇದನೆಯಿಂದ ರೈಲು ಹಳಿಯಲ್ಲಿ ನಿಂತಿದ್ದರೆ ಗೂಡ್ಸ್ ರೈಲನ್ನು ಆಗಾಗಲೇ ನಿಲ್ಲಿಸಲಾಗಿತ್ತು. ಇಷ್ಟೇ ಅಲ್ಲ ಈ ರೈಲು ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲು ಸಂಚಾರವನ್ನು ತಡೆ ಹಿಡಿಯಲು ಸೂಚಿಸಲಾಗಿತ್ತು. ಹೀಗಾಗಿ ರೈಲು ಅಧಿಕಾರಿಗಳು ಅರಣ್ಯಾಧಿಕಾರಿಗಳ ಮುಂದಿನ ಸೂಚನೆವರೆಗೆ ರೈಲು ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.
https://x.com/byadavbjp/status/1942839318499717515/video/2
ಪ್ರಸವ ವೇದನೆಯಿಂದ ರೈಲು ಹಳಿ ಬಳಿ ನಿಂತಿದ್ದ ಗರ್ಭಿಣಿ ಆನೆ 2 ಗಂಟೆ ಕಾಲ ಅಲ್ಲೆ ಇದ್ದು ಮರಿಗೆ ಜನ್ಮ ನೀಡಿದೆ. ಇದೇ ವೇಳೆ ಅರಣ್ಯಾಧಿಕಾರಿಗಳು ಸುತ್ತುವರೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದಾರೆ. ಮರಿಗೆ ಜನ್ಮ ನೀಡಿದ ಅರ್ಧ ಗಂಟೆಯಲ್ಲಿ ಮರಿ ಆನೆ ಹಾಗೂ ತಾಯಿ ಆನೆ ಸ್ಥಳದಿಂದ ನಿಧಾನವಾಗಿ ತೆರಳಿದೆ. ಈ ವೇಳೆ ಅರಣ್ಯಾಧಿಕಾರಿಗಳು ತಾಯಿ ಆನೆ ಹಾಗೂ ಮರಿ ಆನೆಯನ್ನು ಮೆಲ್ಲನೆ ಕಾಡಿನತ್ತ ಸಾಗಿಸುವ ಪ್ರಯತ್ನ ಮಾಡಿದ್ದಾರೆ.
2 ಗಂಟೆಗಳ ಬಳಿಕ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಈ ವಿಡಿಯೋವನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಹಂಚಿಕೊಂಡಿದ್ದಾರೆ. ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.