January17, 2026
Saturday, January 17, 2026
spot_img

ನೀಲಗಿರಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟ ಕಾಡಾನೆ, ಆತಂಕದಲ್ಲಿ ಜನ

ಹೊಸದಿಗಂತ ವರದಿ ರಾಣೆಬೆನ್ನೂರ:

ಕಾಡಿನಿಂದ‌ ತಪ್ಪಿಸಿಕೊಂಡು ಬಂದ ಕಾಡಾನೆಯೊಂದು‌ ತಾಲೂಕಿನ ಕುಸಗೂರ ಗ್ರಾಮದ ನೀಲಗಿರಿ ಅರಣ್ಯದಲ್ಲಿ ಪ್ರದೇಶದಲ್ಲಿ ಬೀಡು ಬಿಟ್ಟ ಘಟನೆ ಸೋಮವಾರದಂದು ಕಂಡು ಬಂದಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯ ಹಿರೇಕೆರೂರ, ಬ್ಯಾಡಗಿ ಹಾಗೂ ರಾಣೆಬೆನ್ನೂರ ಭಾಗದಲ್ಲಿ ಓಡಾಡಿಕೊಂಡಿದ್ದ ಕಾಡಾನೆ ಇದೀಗ ದಿಢೀರನೆ ಸೋಮವಾರ ತಾಲೂಕಿನ ಕೂಸಗೂರ ಗ್ರಾಮದ ಬಳಿಯ ನೀಲಗಿರಿ ಅರಣ್ಯ ತೋಪಿಗೆ ಬಂದು ಬೀಡುಬಿಟ್ಟಿರುವುದರಿಂದ‌ ಆನೆಯನ್ನು ನೋಡಲು ಸುತ್ತಮುತ್ತ ಗ್ರಾಮಗಳ ಜನತೆ ಮುಗಿಬಿದ್ದಿರುವುದು ಕಂಡು ಬಂದಿತು.

ಕಾಡಿನಿಂದ ತಪ್ಪಿಸಿಕೊಂಡ ಒಂಟಿ ಸಲಗ ಮೊದಲು ಹಿರೇಕೆರೂರ ಮಾರ್ಗವಾಗಿ ಬ್ಯಾಡಗಿ ತಾಲೂಕಿನ ಹಿರೇಅಣಜಿ, ಮೋಟೆಬೆನ್ನೂರ, ಸಾತೇನಹಳ್ಳಿ, ಚಿಕ್ಕೇರೂರ ಸೇರಿ ವಿವಿಧೆಡೆ ಓಡಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ರಾತ್ರಿ ಸಮಯದಲ್ಲಿ ಮತ್ತೇ ಸಂಚಾರ ಮಾಡುತ್ತ ಬಂದ ಆನೆ ಕೂಸಗೂರ ಗ್ರಾಮದ ಬಳಿ ಬಂದು ನಿಂತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆನೆ ಸೆರೆ ಹಿಡಿಯಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಶಿವಮೊಗ್ಗ ಸಕ್ರೆಬೈಲು ಬಿಡಾರದ ಆನೆಗಳಾದ ಸೋಮಣ್ಣ ಮತ್ತು ಬಹದ್ದೂರ್ ಎಂಬ ಎರಡು ಆನೆಗಳನ್ನು ತರಿಸಿಕೊಳ್ಳಲಾಗಿದೆ. ಆದರೆ, ಕಾರ್ಯಾಚರಣೆಗೆ 5 ಆನೆಗಳು ಬೇಕಾಗಿರುವ ಕಾರಣ ಮೈಸೂರಿನಿಂದ 3 ಬಿಡಾರದ ಆನೆಗಳನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಕೂಸಗೂರು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆ ಮತ್ತೇ ಬೇರೆಡೆ ಹೋಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಆನೆಯ ಸುತ್ತಲಿನ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಇದರ ಜತೆಗೆ ಆನೆಯ ಚಲನವಲನದ ಮೇಲೆ ಗಮನ ಹರಿಸಲು ಡ್ರೋನ್ ಕ್ಯಾಮರಾ ಬಿಡಲಾಗಿದೆ. ರಾತ್ರಿ ಸಮಯದಲ್ಲಿ ಆನೆ ಬೇರೆಡೆ ಹೋಗದಂತೆ ವಿದ್ಯುತ್ ದೀಪಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

ಆನೆ ನೋಡಲು ಸಾವಿರಾರು ಜನ ಮುಗಿಬಿದ್ದಿದ್ದು ಜನರ ನಿಯಂತ್ರಣ ಮಾಡುವುದು ಪೊಲೀಸರಿಗೆ ತಲೆನೋವಾಗಿದೆ. ಜನರು ತಂಡೋಪ ತಂಡವಾಗಿ ಅರಣ್ಯ ಪ್ರದೇಶಕ್ಕೆ ನುಗ್ಗುತ್ತಿದ್ದು, ಜನರ ಕೂಗಾಟದಿಂದ ಆನೆ ಮತ್ತಷ್ಟು ಹೆದರಿಕೊಂಡು ಬೇರೆಡೆ ಹೋಗುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.

ಮೈಸೂರಿನಿಂದ 3 ಆನೆಗಳು ಬರುವುದು ತಡವಾದ ಹಿನ್ನೆಲೆಯಲ್ಲಿ ಸೋಮವಾರ ಆನೆ ಸೆರೆಗೆ ನಡೆಯಬೇಕಿದ್ದ ಕಾರ್ಯಾಚರಣೆಯನ್ನು ಡಿ. 23ರಂದು ಬೆಳಗ್ಗೆ ನಡೆಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಆನೆ ಸೆರೆಗೆ ಅರವಳಿಕೆ ತಜ್ಞರು, ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Content is protected !!