ಹೊಸದಿಗಂತ ಹಾಸನ:
ನಗರದ ವಿವಿಧ ಭಾಗಗಳಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಕ್ಲಿನಿಕ್‌ಗಳು ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಜಿಲ್ಲಾ ಕೆಪಿಎಂಇ ನೋಡಲ್ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿಗಳ ತಂಡ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳು ಶುಕ್ರವಾರ ಅನಿರೀಕ್ಷಿತ ದಾಳಿ ನಡೆಸಿ ಬೀಗಮುದ್ರೆ ಹಾಕಿ ಸಂಬಂಧಿಸಿದವರಿಗೆ ನೊಟಿಸ್ ಜರಿಗೊಳಿಸಿದರು.
ಹೊಸ ಬಸ್‌ನಿಲ್ದಾಣ ಮುಂಭಾಗದ ಗಣಪತಿ ಕ್ಲಿನಿಕ್‌ನ್ನು ಕೆಪಿಎಂಇ ಅಡಿಯಲ್ಲಿ ನೋಂದಣಿ ಆಗದೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲಿದ್ದ ಆಯುರ್ವೇದಿಕ್ ವೈದ್ಯರು ಆಲೋಪತಿ ಚಿಕಿತ್ಸೆ ನೀಡುತ್ತಿರುವುದು ಗಮನಕ್ಕೆ ಬಂತು. ಕೆಪಿಎಂಸಿ ಕಾಯ್ದೆಗೆ ಸಂಬಂಧಿಸಿದ ಯಾವುದೇ ಕ್ರಮವನ್ನು ಅನುಸರಿಸದೇ ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು ದೃಢಪಟ್ಟ ಹಿನ್ನೆಲೆ ಅಧಿಕಾರಿಗಳ ತಂಡದವರು ಕ್ಲಿನಿಕ್‌ಗೆ ನೋಟಿಸ್ ಜಾರಿ ಮಾಡಿ ಬೀಗ ಹಾಕಿ ಲಕೋಟೆಯಿಂದ ಸಿಜ್ ಮಾಡಿದರು.
ಕೈಗಾರಿಕಾ ಪ್ರದೇಶದ ಸಿದ್ದೇಶ್ವರ ಕ್ಲಿನಿಕ್, ಚನ್ನಪಟ್ಟಣದ ಹೇಮಂತ್ ಕ್ಲಿನಿಕ್, ದಕ್ಷಾ ಕ್ಲಿನಿಕ್ ಹಾಗೂ ಬೂವನಹಳ್ಳಿ ಗ್ರಾಮದ ವಿ.ಆರ್.ಕ್ಲಿನಿಕ್‌ಗಳು ಕೆಪಿಎಂಇ ಅಡಿಯಲ್ಲಿ ಆಯುರ್ವೇದಿಕ್ ಪದ್ಧತಿಯಲ್ಲಿ ಲೈಸೆನ್ಸ್ ಪಡೆದುಕೊಂಡು ಅಲೋಪತಿ ಔಷಧೊಪಚಾರ ನೀಡುತ್ತಿದ್ದರು. ಬಿಎಎಂಎಸ್ ವೈದ್ಯರು ಕ್ರಾಸ್ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ದಾಳಿ ಸಂದರ್ಭ ಕ್ಲಿನಿಕ್‌ನ ಒಳಭಾಗದಲ್ಲಿ ಡ್ರಿಪ್ ಸ್ಟ್ಯಾಂಡ್ ಲ್ಯಾಬ್ ಪರೀಕ್ಷೆ ಮಾಡುವ ಪರಿಕರಗಳು, ಇಂಜೆಕ್ಷನ್ ನೀಡಲ್‌ಗಳು ಹಾಗೂ ಆಲೋಪತಿ ಔಷಧೀಗಳು ದೊರೆತವು. ಇವುಗಳನ್ನು ಗಮನಸಿ ಎಲ್ಲ ಮೂರು ಕ್ಲಿನಿಕ್‌ಗಳನ್ನು ಸಿಜ್ ಮಾಡಿ ನೋಟಿಸ್ ಜಾರಿ ಮಾಡಿ ಸಮಜಾಯಿಸಿ ಉತ್ತರ ನೀಡಲು ಅಧಿಕಾರಿಗಳು ಆದೇಶಿಸಿದರು.
ಸಾರ್ವಜನಿಕರು ಹಾಸನ ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಕ್ಲಿನಿಕ್‌ಗಳು ಮತ್ತು ಕ್ರಾಸ್ ಪ್ರಾಕ್ಟೀಸ್ ಮಾಡುತ್ತಿರುವವರ ವಿವರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಒದಗಿಸಬೇಕು ಎಂದು ಈ ಸಂದರ್ಭ ಮನವಿ ಮಾಡಿದರು.