ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ವೈಲ್ಡ್ ಪೋಲಿಯೋ ವೈರಸ್ ಟೈಪ್ 1 ಮಾದರಿ ಪತ್ತೆಯಾಗಿದೆ. ಪಾಕಿಸ್ತಾನದ ಎರಡು ವಿಭಿನ್ನ ಭಾಗದಲ್ಲಿ ಕೊಳಚೆ ನೀರಿನಲ್ಲಿ ಇದರ ಸುಳಿವು ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸೆಪ್ಟೆಂಬರ್ 5 ರಂದು ಕರಾಚಿಯ ದಕ್ಷಿಣ ಬಂದರು ನಗರದಲ್ಲಿ ಕೊಳಚೆ ನೀರಿನಲ್ಲಿ ಈ ಮಾದರಿ ಸಂಗ್ರಹಿಸಲಾಗಿದೆ. ಮತ್ತೊಂದನ್ನು ಹಂಗು ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದ್ದು, ಎರಡರ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿಕೆ ಕಾರ್ಯದ ಅಭಿಯಾನ ಅಕ್ಟೋಬರ್ 2ರಿಂದ ಆರಂಭವಾಗಲಿದ್ದು, 40 ಮಿಲಿಯನ್ ಮಕ್ಕಳಿಗೆ ಪೋಲಿಯೋ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಪರಿಸರದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿರುವುದು ಅತ್ಯಂತ ಕಾಳಜಿ ವಿಷಯವಾಗಿದ್ದು, ಇದು ಪಾಕಿಸ್ತಾನ ಪೋಲಿಯೋ ಕಾರ್ಯಕ್ರಮದ ಕಣ್ಗಾವಲು ವ್ಯವಸ್ಥೆಯ ದಕ್ಷತೆಯನ್ನು ಎತ್ತಿ ತೋರಿಸುತ್ತದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವ ನದೀಪ್ ಜಾನ್, ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ನಾವು ದೇಶಾದ್ಯಂತ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ. ಐದು ವರ್ಷದ ಮಕ್ಕಳಿಗೆ ಲಸಿಕೆ ಕೊಡಿಸುವಲ್ಲಿ ಪೋಷಕರು ಮುಂದಾಗಬೇಕು. ಅವರು ನಿಯಮಿತ ಲಸಿಕೆಯನ್ನು ಕೂಡ ಪಡೆಯಬೇಕು ಎಂದಿದ್ದಾರೆ.
ಈ ವರ್ಷ ಪಾಕಿಸ್ತಾನದಲ್ಲಿ ಎರಡು ಪೋಲಿಯೋ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ 27 ಪಾಸಿಟಿವ್ ಪ್ರಕರಣಗಳು ಪರಿಸರದ ಮಾದರಿಯಲ್ಲಿ ಪತ್ತೆಯಾಗಿವೆ.