Saturday, October 18, 2025

ಬೀದಿ ನಾಯಿಗಳ ಕ್ರೌರ್ಯಕ್ಕೆ ವನ್ಯಜೀವಿಯ ಬಲಿ: ಕಾಡಿನಂಚಿನಲ್ಲಿ ಜಿಂಕೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದಿ ನಾಯಿಗಳ ಹಿಂಡಿನ ಭೀಕರ ದಾಳಿಗೆ ಸಿಲುಕಿ ಸುಮಾರು 20 ವರ್ಷ ಪ್ರಾಯದ ಒಂದು ಜಿಂಕೆ ಬಲಿಯಾದ ದುರಂತ ಘಟನೆಯು ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಆನೆಕಾಡು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಜಾಗದಲ್ಲಿ ಈ ದಾಳಿ ನಡೆದಿದ್ದು, ಬೀದಿ ನಾಯಿಗಳು ಜಿಂಕೆಯನ್ನು ಕೊಂದಿವೆ. ಜಿಂಕೆಯು ಆನೆ ಕಂದಕದಲ್ಲಿ (ಎಲಿಫೆಂಟ್ ಟ್ರೆಂಚ್) ನಿರ್ಜೀವವಾಗಿ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.

ಸ್ಥಳೀಯ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದರು. ಮಾಹಿತಿ ಅರಿತು ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಜಿ.ಪಂ. ಮಾಜಿ ಸದಸ್ಯ ಆರ್.ಕೆ. ಚಂದ್ರು ಅವರು, ಮುಂದಿನ ದಿನಗಳಲ್ಲಿ ಇಂತಹ ವನ್ಯಜೀವಿಗಳ ಮೇಲಿನ ದಾಳಿಗಳು ನಡೆಯದಂತೆ ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೀದಿ ನಾಯಿಗಳ ಉಪಟಳದಿಂದ ವನ್ಯಜೀವಿಗಳಿಗೆ ಆಗುತ್ತಿರುವ ಹಾನಿ ಬಗ್ಗೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

error: Content is protected !!