ತಮ್ಮ ಶಿಕ್ಷಣ ಸಂಸ್ಥೆಯ 40 ವರ್ಷಾಚರಣೆ ಕುರಿತ ಸುದ್ದಿಗೋಷ್ಠಿಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರಿಗೆ ಹೆಚ್ಚು ಮಣೆ ಹಾಕಲಾಗುತ್ತಿದೆ. ನಾನು ಸ್ಥಳೀಯನಾಗಿದ್ದು, ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಆದರೆ, ಕಾಂಗ್ರೆಸ್ ಅಥವಾ ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿರುವುದರಿಂದ ಬೇರೆ ಬೇರೆ ಲೆಕ್ಕಾಚಾರದಲ್ಲಿ ಟಿಕೇಟ್ ನೀಡುವುದು ಇದ್ದೇ ಇರುತ್ತದೆ ಎಂದು ಹೇಳಿದರು.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ನಾನು ಬಿಜೆಪಿ ಪಕ್ಷದಿಂದ ಟಿಕೇಟ್ ಕೇಳಿದ್ದೆ. ಆದರೆ, ವಯಸ್ಸಿನ ಅಂತರದ ಕಾರಣಕ್ಕೆ ಹಿಂದೆ ಸರಿಯಲಾಗಿತ್ತು. ಈಗ ಮತ್ತೆ ಲೋಕಸಭೆಗೆ ಚುನಾವಣೆ ಹತ್ತಿರವಾಗುತ್ತಿದೆ. ಈಗಾಗಲೇ ಪಕ್ಷದ ವರಿಷ್ಠರ ವಲಯದಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ವಿವಿಧ ಹಂತದ ನಾಯಕರ ಜೊತೆಗೆ ಟಿಕೇಟ್ ಕುರಿತು ಮಾತುಕತೆ ನಡೆಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂತಿಮವಾಗಿ ಯಾರಿಗೆ ಟಿಕೇಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ಸಂಸದೀಯ ಮಂಡಳಿಯಲ್ಲಿ ತೀರ್ಮಾನ ಮಾಡಿ ಟಿಕೇಟ್ ನೀಡುವುದು ನಮ್ಮ ಪಕ್ಷದ ಪದ್ಧತಿ. ಅಲ್ಲಿಯ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು.
ಈಗಾಗಲೇ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಕುರಿತು ಪಕ್ಷದಿಂದ ಮೂರು ಬಾರಿ ಸಮೀಕ್ಷೆ ಮಾಡಿದ್ದಾರೆ. ಸಮೀಕ್ಷೆ ಆಧಾರದಲ್ಲೇ ನಮ್ಮ ಪಕ್ಷದಲ್ಲಿ ಟಿಕೇಟ್ ನೀಡುವುದು. ಹಾಗಾಗಿ ನಾನು ಕೂಡಾ ಆಕಾಂಕ್ಷಿ ಎಂದು ವರಿಷ್ಠರ ಬಳಿ ಹೇಳಿದ್ದೇನೆ. ಸಂವಿಧಾನದಲ್ಲಿ ಯಾರು ಬೇಕಾದರೂ ಸ್ಪರ್ಧಿಸಲು ಅವಕಾಶ ಇರುವುದರಿಂದ ಈ ಬೇಡಿಕೆ ಇಟ್ಟಿದ್ದೇನೆ. ಒಂದು ವೇಳೆ ನಮಗೆ ಟಿಕೇಟ್ ಸಿಕ್ಕಿದರೆ ಇಡೀ ಕ್ಷೇತ್ರ ಸುತ್ತಾಡಿ ಚುನಾವಣೆ ನಡೆಸುತ್ತೇವೆ. ಎ.ನಾರಾಯಣಸ್ವಾಮಿ ಅಥವಾ ಬೇರೆ ಯಾರಿಗೆ ಕೊಟ್ಟರೂ ಹೊಳಲ್ಕೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇವೆ ಎಂದು ಉತ್ತರಿಸಿದರು.