ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ ಯೋಜನೆ ಶುರುವಾಗಿದ್ದು, ಈ ವೇಳೆ ವಿದ್ಯುತ್ ಬಿಲ್ (Electricity Bill) ಹಿಂಬಾಕಿ ಇದ್ದರೂ ಗೃಹಜ್ಯೋತಿ ಯೋಜನೆಯ (GruhaJyothi Scheme) ಪ್ರಯೋಜನ ಸಿಗುತ್ತಾ ಎಂಬ ಗೊಂದಲಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಕಚೇರಿ ವಿಶೇಷ ಪ್ರಕಟಣೆ ಹೊರಡಿಸಿದೆ.
ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು. ಮೂರು ತಿಂಗಳು ಕಾಲಾವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.
ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ.
ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25ನೇ ದಿನಾಂಕದಿಂದ ಮುಂದಿನ ತಿಂಗಳ 25 ನೇ ದಿನಾಂಕದವರೆಗೆ ಇರುತ್ತದೆ. ಈ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಹಾಗಾಗಿ ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ ಎಂದು ಇಂಧನ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.