Monday, November 10, 2025

💰13 ಸಾವಿರ ಚಿನ್ನ 8-9 ಸಾವಿರಕ್ಕೆ ಇಳಿಯುತ್ತಾ? ಬೆಳ್ಳಿ ಬೆಲೆ ಅರ್ಧಕ್ಕರ್ಧ ಕುಸಿತವಾಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿವೆ. ಅಮೂಲ್ಯ ಲೋಹಗಳ ಮೇಲಿನ ಬೇಡಿಕೆ ವಿಪರೀತ ಹೆಚ್ಚಾಗಿದ್ದು, ಹೂಡಿಕೆದಾರರು ಮತ್ತು ಕೈಗಾರಿಕೆಗಳಿಂದ ಇವುಗಳಿಗೆ ಅಪಾರ ಒಲವು ವ್ಯಕ್ತವಾಗಿದೆ.

ಆದರೆ, ಈ ಭಾರಿ ಏರಿಕೆಯ ನಡುವೆಯೇ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಣನೀಯವಾಗಿ ಕುಸಿಯಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಚಿನ್ನದ ಬೆಲೆ ಪ್ರಸ್ತುತದ ಸುಮಾರು ರೂ. 13,000 ಸಮೀಪದಿಂದ ರೂ. 8,000-9,000ಕ್ಕೆ ಇಳಿಯಬಹುದು ಎಂದೂ, ಬೆಳ್ಳಿ ಬೆಲೆ ಅರ್ಧದಷ್ಟು ಕುಸಿಯಬಹುದು ಎಂದೂ ಊಹಾಪೋಹಗಳು ಹಬ್ಬಿವೆ.

ಬೆಲೆಗಳು ದಿಢೀರ್ ಹೆಚ್ಚಳವಾಗಿದ್ದು ಏಕೆ?
ಕಳೆದ ಕೆಲ ತಿಂಗಳುಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಈ ಅಸ್ವಾಭಾವಿಕ ಏರಿಕೆಗೆ ಮುಖ್ಯ ಕಾರಣಗಳು ಹೀಗಿವೆ:

ಭೌಗೋಳಿಕ-ರಾಜಕೀಯ ಅನಿಶ್ಚಿತತೆ: ಜಾಗತಿಕವಾಗಿ ಹೆಚ್ಚುತ್ತಿರುವ ಅಸ್ಥಿರತೆಯು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾದ (Safe Haven) ಚಿನ್ನದ ಕಡೆಗೆ ಸೆಳೆದಿದೆ.

ಬೆಳ್ಳಿಯ ಕೈಗಾರಿಕಾ ಬೇಡಿಕೆ: ಬೆಳ್ಳಿಯು ಆಭರಣ ಮಾತ್ರವಲ್ಲದೆ ಕೈಗಾರಿಕೆಗಳಿಗೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಸೌರ ಫಲಕಗಳ ತಯಾರಿಕೆಗೆ ಬೇಕಾಗುವ ಪ್ರಮುಖ ಲೋಹ. ಬೇಡಿಕೆಗೆ ತಕ್ಕಷ್ಟು ಸರಬರಾಜು ಇಲ್ಲದಿರುವುದು ಬೆಳ್ಳಿಯ ಕೊರತೆಗೆ ಕಾರಣವಾಗಿದೆ. ಬೆಳ್ಳಿಯ ಬೆಲೆ ಕೆಲವೇ ತಿಂಗಳುಗಳಲ್ಲಿ ಶೇ. 70ಕ್ಕಿಂತಲೂ ಹೆಚ್ಚಾಗಿದೆ.

ಹೂಡಿಕೆದಾರರ ಒಲವು: ಚಿನ್ನದ ಜೊತೆಗೆ ಬೆಳ್ಳಿ ಮಾರುಕಟ್ಟೆಗೂ ಹೂಡಿಕೆದಾರರು ಮುಗಿಬಿದ್ದಿರುವುದು ಬೆಲೆಯನ್ನು ಗಗನಕ್ಕೇರಿಸಿದೆ.

ಬೆಲೆ ಕುಸಿತದ ಸಾಧ್ಯತೆ ಎಷ್ಟು?
ಈ ಕುರಿತು ಮಾರುಕಟ್ಟೆ ವಿಶ್ಲೇಷಕರು ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ. ಜೂಲಿಯಸ್ ಬಾಯರ್ ಸಂಸ್ಥೆಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಿಲಿಂದ್ ಮುಚ್ಚಾಲ ಅವರ ಪ್ರಕಾರ,

ಚಿನ್ನ: ಚಿನ್ನ ಒಂದು ಸೀಮಿತ ಸಂಪನ್ಮೂಲ ಲೋಹವಾದ್ದರಿಂದ ಇದರ ಬೆಲೆ ತೀಕ್ಷ್ಣವಾಗಿ ಇಳಿಕೆಯಾಗುವ ಸಾಧ್ಯತೆ ಕಡಿಮೆ. ಜಾಗತಿಕ ಪರಿಸ್ಥಿತಿಗಳನ್ನು ಗಮನಿಸಿದರೆ, ಹೆಚ್ಚೆಂದರೆ ಶೇ. 10-20 ರಷ್ಟು ಮಾತ್ರ ಬೆಲೆ ಕಡಿಮೆ ಆಗಬಹುದು. ಒಂದು ವೇಳೆ ಬೆಲೆ ಇಳಿದರೂ, ಅದು ಅಲ್ಪಾವಧಿಗೆ ಮಾತ್ರ. ಬಹಳ ಬೇಗ ಚಿನ್ನದ ಬೆಲೆ ಮತ್ತೆ ಹೊಸ ಎತ್ತರಕ್ಕೆ ಜಿಗಿಯುವ ಅವಕಾಶ ಹೆಚ್ಚು.

ಬೆಳ್ಳಿ: ಬೆಳ್ಳಿ ಮಾರುಕಟ್ಟೆ ಚಿನ್ನಕ್ಕೆ ಹೋಲಿಸಿದರೆ ಚಿಕ್ಕದಾಗಿದ್ದರೂ, ಇದರ ಪ್ರಸಕ್ತ ಬೆಲೆಯುಬ್ಬರಕ್ಕೆ ಮುಖ್ಯ ಕಾರಣ ಹೂಡಿಕೆಗಳೇ ಆಗಿವೆ. ಈ ಹೂಡಿಕೆಗಳು ಮಾರುಕಟ್ಟೆಯಿಂದ ಹೊರನಡೆದರೆ, ಬೆಳ್ಳಿ ಬೆಲೆ ದಿಢೀರ್ ಕುಸಿಯುವ ಸಾಧ್ಯತೆ ಇದೆ. ಆದಾಗ್ಯೂ, ಸೆಂಟ್ರಲ್ ಬ್ಯಾಂಕುಗಳು ಈ ಪ್ರಮಾಣದ ದಿಢೀರ್ ಕುಸಿತಕ್ಕೆ ಅವಕಾಶ ನೀಡದಿರಬಹುದು.

ತಜ್ಞರ ಮತ್ತೊಂದು ಪ್ರಮುಖ ಅಭಿಪ್ರಾಯವೆಂದರೆ, ಬ್ಯಾಂಕ್ ಆಫ್ ಅಮೆರಿಕದಂತಹ ಸಂಸ್ಥೆಗಳು 2026ರ ವೇಳೆಗೆ ಬೆಳ್ಳಿಗೆ ಬೃಹತ್ ಬೆಲೆ ಗುರಿಯನ್ನು ನಿಗದಿಪಡಿಸಿವೆ. ಔನ್ಸ್​ಗೆ ಪ್ರಸ್ತುತ ರೂ. 44 ಇರುವ ಬೆಲೆ, 2026ಕ್ಕೆ ರೂ. 65ಕ್ಕೆ ಏರಬಹುದು ಎಂದು ನಿರೀಕ್ಷಿಸಿದೆ. ಅಂದರೆ, ಮುಂದಿನ ವರ್ಷದಲ್ಲಿ ಬೆಳ್ಳಿ ಬೆಲೆ ಶೇ. 50 ರಷ್ಟು ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ.

error: Content is protected !!