ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಗ್ಗಟ್ಟಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಮೊದಲ ಸಭೆ ನಡೆಸಿದ್ದು, ಸಭೆಯಲ್ಲಿ ಜೆಡಿಯು, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ, ಟಿಎಂಸಿ, ಎನ್‌ಸಿಪಿ, ಆಪ್ ಸೇರಿದಂತೆ 16 ಪಕ್ಷಗಳು ಈ ಮೈತ್ರಿ ಸಭೆಯಲ್ಲಿ ಪಾಲ್ಗೊಂಡಿದೆ.
ಆದರೆ ಇದೀಗ ಸಭೆ ನಡೆದ ಹೊರಬಂದ ಬೆನ್ನಲ್ಲೇ ಮೈತ್ರಿಯಲ್ಲಿ ಬಿರುಕು ಕಾಣಸಿಕೊಳ್ಳಲು ಆರಂಭಿಸಿದೆ. ಆಮ್ ಆದ್ಮಿ ಪಾರ್ಟಿ ಮೈತ್ರಿಯಿಂದ ಒಂದು ಕಾಲು ಹೊರಗಿಟ್ಟಿದೆ.
ದೆಹಲಿ ಹಾಗು ಕೇಂದ್ರ ಸರಕಾರದ ನಡುವಿನ ವಾಕ್ಸಮರವಾದ ಸುಗ್ರೀವಾಜ್ಞೆಯಲ್ಲಿ ಮುಖ್ಯಕಾರ್ಯದರ್ಶಿಗೆ ಸಚಿವ ಸಂಪುಟಕ್ಕಿಂತ ಉನ್ನತ ಸ್ಥಾನ ನೀಡಿದ ವಿಚಾರ ಕೇಜ್ರಿವಾಲ್ ಹಲವು ಪಕ್ಷಗಳ ಬೆಂಬಲ ಕೋರಿದೆ. ಆದರೆ ಕಾಂಗ್ರೆಸ್ ಈ ಕುರಿತು ಆಪ್‌ಗೆ ಬೆಂಬಲ ನೀಡುವ ಯಾವುದೇ ಖಚಿತತೆ ನೀಡಿಲ್ಲ.
ಇಂದಿನ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಇದೇ ವಿಚಾರ ಮುಂದಿಟ್ಟಿದ್ದು, ಕೇಂದ್ರದ ವಿರುದ್ದ ಆಪ್ ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡದಿದ್ದರೆ, ಮೈತ್ರಿ ಕೂಟದಿಂದ ಹೊರಗುಳಿಯುವುದಾಗಿ ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ ನೀಡಿದೆ.
ಕೇಂದ್ರದ ವಿರುದ್ಧ ಆಪ್ ನಡೆಸುತ್ತಿರುವ ಹೋರಾಟದಲ್ಲಿ ಕಾಂಗ್ರೆಸ್ ಇದುವರೆಗೂ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಈಗಾಗಲೇ ಹಲವು ಪಕ್ಷಗಳು ಕೇಜ್ರಿವಾಲ್‌ಗೆ ಬೆಂಬಲ ಸೂಚಿಸಿದೆ. ಇದಕ್ಕಾಗಿ ಕೇಜ್ರಿವಾಲ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿ ಹಲವು ಪ್ರಮುಖ ನಾಯಕರನ್ನು ಭೇಟಿಯಾಗಿದ್ದರು.
ಕೇಂದ್ರಕ್ಕೆ ದೆಹಲಿಯ ಆಡಳಿತ ಸೇವೆಗಳ ಮೇಲೆ ಅಧಿಕಾರ ನೀಡಿರುವ ಸುಗ್ರೀವಾಜ್ಞೆ ವಿರುದ್ಧ ರಾಜ್ಯಸಭೆಯಲ್ಲಿ ಮತ ಹಾಕಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್‌ಗೆ ಬೆಂಬಲ ಸೂಚಿಸುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಘೋಷಿಸಿದ್ದರು.
ಇನ್ನು ವಿಪಕ್ಷಗಳ ಸಭೆಗೂ ಮುನ್ನವೇ ಮತ್ತೊಂದು ಒಡಕು ಸ್ಫೋಟಗೊಂಡಿತ್ತು. ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಮತ್ತು ಮಾಯಾವತಿ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು.