ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ವಿಮಾನಗಳಲ್ಲಿ ಪವರ್ ಬ್ಯಾಂಕ್ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಹೊಸ ಕಾನೂನು ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
ಪ್ರಪಂಚದಾದ್ಯಂತ ಲಿಥಿಯಂ-ಆಯಾನ್ ಬ್ಯಾಟರಿಯಿಂದ ಉಂಟಾದ ಅಗ್ನಿ ಅವಘಡಗಳ ಬಳಿಕ ಈ ಕ್ರಮದ ಚರ್ಚೆ ವೇಗ ಪಡೆದುಕೊಂಡಿದೆ. ಇತ್ತೀಚೆಗೆ, ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿತ್ತು.
ಹೀಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಾಂತ್ರಿಕ ಇನ್‌ಪುಟ್ ಸಂಗ್ರಹಿಸುವ ಸುರಕ್ಷತೆಯ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.
ದೆಹಲಿ ವಿಮಾನ ನಿಲ್ದಾಣದಿಂದ ನಾಗಲ್ಯಾಂಡ್‌ನ ದಿಮಾಪುರಕ್ಕೆ ಭಾನುವಾರ (ಅಕ್ಟೋಬರ್ 19) ಹೊರಡಲು ಸಿದ್ಧತೆ ನಡೆಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯವಿದಲ್ಲದೆ ಪಾರಾಗಿದ್ದರು. ಜತೆಗೆ ಯಾವುದೇ ಹಾನಿ ಸಂಭವಿಸಿರಲಿಲ್ಲ. ಲಿಥಿಯಂ ಬ್ಯಾಟರಿ ಚಾಲಿತ ವಸ್ತುಗಳ ಸುರಕ್ಷತೆಯ ಬಗ್ಗೆ ಅನುಮಾನ ಮೂಡುತ್ತಿರುವ ಮಧ್ಯೆ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ವಿಮಾನಗಳಲ್ಲಿ ಪ್ರಯಾಣಿಕರು ಹೇಗೆ ಪವರ್ ಬ್ಯಾಂಕ್‌ಗಳನ್ನು ಹೇಗೆ ಬಳಸುತ್ತಾರೆ ಎಂಬುದರ ಕುರಿತು ಡಿಜಿಸಿಎ ಸಮಗ್ರ ಪರಿಶೀಲನೆಯನ್ನು ಪ್ರಾರಂಭಿಸಿದೆ. ಬಳಕೆ ಅಪಾಯಕಾರಿ ಎಂದು ಕಂಡುಬಂದರೆ ವಿಮಾನದೊಳಗೆ ಪವರ್ ಬ್ಯಾಂಕ್ ಬಳಕೆಯನ್ನು ನಿಷೇಧಿಸಲು, ಸಾಗಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ನಿಯಮ ಜಾರಿಗೆ ತರಬಹುದು ಎನ್ನಲಾಗಿದೆ.
ದುಬೈನ ಎಮಿರೇಟ್ಸ್ ಏರ್ಲೈನ್ಸ್ ಈಗಾಗಲೇ ಜಾರಿಗೆ ತಂದಿದೆ ದುಬೈನ ಎಮಿರೇಟ್ಸ್ ಏರ್ಲೈನ್ಸ್ ಅಕ್ಟೋಬರ್ 1ರಿಂದ ಪವರ್ ಬ್ಯಾಂಕ್ಗಳ ಬಳಕೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿದೆ. ಪ್ರಯಾಣಿಕರು 100 ವ್ಯಾಟ್ ಸಾಮರ್ಥ್ಯದ ಪವರ್ ಬ್ಯಾಂಕ್ ಅನ್ನು ಮಾತ್ರ ಕೊಂಡೊಯ್ಯಬಹುದು ಎಂದು ಕಂಪನಿ ಹೇಳಿದೆ.
ಆದರೆ ಅವರು ಹಾರಾಟದ ಸಮಯದಲ್ಲಿ ಸಾಧನಗಳನ್ನು ಚಾರ್ಜ್ ಮಾಡಲು ಬಳಸುವಂತಿಲ್ಲ.ಹೊಸ ನಿಯಮಗಳ ಅಡಿಯಲ್ಲಿ, ಪ್ರತಿ ಪವರ್ ಬ್ಯಾಂಕ್ನ ಬ್ಯಾಟರಿ ಸಾಮರ್ಥ್ಯದ ರೇಟಿಂಗ್ ಅನ್ನು ಅದರ ಮೇಲೆ ಸ್ಪಷ್ಟವಾಗಿ ಬರೆಯುವುದು ಕಡ್ಡಾಯವಾಗಿದೆ.
ಹೆಚ್ಚಿನ ಸ್ಮಾರ್ಟ್ಫೋನ್ಗಳು ಮತ್ತು ಈಗಿನ ಲಿಥಿಯಂ ಬ್ಯಾಟರಿ ಸಾಧನಗಳು ಟ್ರಿಕಲ್ ಚಾರ್ಜಿಂಗ್ ಸಿಸ್ಟಂ ಅನ್ನು ಹೊಂದಿವೆ. ಇದು ಬ್ಯಾಟರಿಗೆ ಕ್ರಮೇಣ ಕರೆಂಟ್ ಅನ್ನು ವರ್ಗಾಯಿಸುವ ಮೂಲಕ ಓವರ್ ಚಾರ್ಜಿಂಗ್ ತಡೆಯುತ್ತದೆ. ಆದರೆ ಅಗ್ಗದ ಪವರ್ ಬ್ಯಾಂಕ್ಗಳು ಈ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ. ಅಧಿಕ ಬಿಸಿಯಾಗುವಿಕೆ ಮತ್ತು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ವಾಯುಯಾನಅಧಿಕಾರಿಗಳು ಈಗ ಈ ಸಾಧನಗಳಿಗೆ ಕಠಿಣ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ.
ಸಿಂಗಾಪುರ ಏರ್ಲೈನ್ಸ್ ಏಪ್ರಿಲ್ 1ರಿಂದ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಪ್ರಯಾಣಿಕರು ಇನ್ನುಮುಂದೆ ವಿಮಾನದ ಯುಎಸ್ಬಿ ಪೋರ್ಟ್ನಿಂದ ತಮ್ಮ ಪವಬರ್ ಬ್ಯಾಂಜ್ಗಳನ್ನು ಚಾರ್ಜ್ ಮಾಡಲು ಅವುಗಳನ್ನು ಬಳಸಲಾಗುವುದಿಲ್ಲ. ಇದರ ಉದ್ದೇಶ ವಿಮಾನಗಳಲ್ಲಿ ಬೆಂಕಿಯನ್ನು ತಡೆಗಟ್ಟುವುದಾಗಿದೆ.
ಚೀನಾದಿಂದ ದಕ್ಷಿಣ ಕೊರಿಯಾಕ್ಕೆ ಹೋಗುತ್ತಿದ್ದ ಏರ್ ಚೀನಾ ವಿಮಾನದಲ್ಲಿ ಲಿಥಿಯಂ ಬ್ಯಾಟರಿ ಬೆಂಕಿಗೆ ಆಹುತಿಯಾದ ಘಟನೆ ಇತ್ತೀಚೆಗೆ ಸಂಭವಿಸಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ವಿಮಾನವನ್ನು ಶಾಂಘೈನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.

