ಹೊಸ ದಿಗಂತ ವರದಿ , ಮೈಸೂರು:
ನಾನು ಜೆಡಿಎಸ್ನಲ್ಲಿಯೇ ಉಳಿಯುತ್ತೇನೆ. ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಹಿರಂಗವಾಗಿ ಘೋಷಿಸುವ ಮೂಲಕ ಹಲವು ತಿಂಗಲಿನಿದ ದ ಎದ್ದಿದ್ದ ಎಲ್ಲಾ ರಾಜಕೀಯ ಗೊಂದಲಗಳಿಗೆ ಗುರುವಾರ ತೆರೆ ಎಳೆದರು.
ದೊಡ್ಡವರು ನನ್ನನ್ನು ಪ್ರೀತಿಯ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ನಾನು ಜೆಡಿಎಸ್ ನಲ್ಲಿ ಉಳಿಯುತ್ತೇನೆ. ಯಾವುದೇ ತ್ಯಾಗ ಮಾಡಲು ಸಿದ್ದ ಇದ್ದೇನೆ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇನೆ. ಅದಕ್ಕಾಗಿ ದುಡಿಯುತ್ತೇನೆ. ಈಗ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ, ಒಂದೇ ಒಂದು ದಿನ ಪಕ್ಷಕ್ಕೆ ಕಳಂಕ ಅಥವಾ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರುವಂತೆ ಕರೆದಿದ್ದರು. ಬಿಜೆಪಿಯವರೂ ಕರೆದಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು
ಹಿಂದೆ ಹಲವು ಸ್ಥಾನಮನವನ್ನು ಮಾಜಿ ಪ್ರಧಾನಿಗಳು ನನಗೆ ನೀಡಿದ್ದರು. ಮೂರು ವರ್ಷ ದೂರ ಇದ್ದರೂ ನನ್ನ ಬಗ್ಗೆ ಅವರಲ್ಲಿನ ಪ್ರೀತಿ ಕಡಿಮೆ ಆಗಿರಲಿಲ್ಲ. ಎಂದೂ ನನ್ನ ಬಗ್ಗೆ ಲಘುವಾಗಿ ಒಂದು ಮಾತನ್ನೂ ಆಡಲಿಲ್ಲ. ಅವರು, ಪ್ರಾದೇಶಿಕ ಪಕ್ಷ ಕಟ್ಟಿ ಉಳಿಸಿ ಬೆಳೆಸಿದರು. ಹೆಚ್.ಡಿ.ದೇವೇಗೌಡರು ಕಂಡ ಕನಸನ್ನು ನನಸು ಮಾಡುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತನಾಡುತ್ತಲೇ ಭಾವುಕರಾದ ಜಿ.ಟಿ ದೇವೇಗೌಡರು ಬಿಕ್ಕಿಬಿಕ್ಕಿ ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಸಾ.ರಾ.ಮಹೇಶ್, ಸಿ ಎಸ್ ಪುಟ್ಟರಾಜು, ಜಿ.ಟಿ.ದೇವೇಗೌಡರ ಪತ್ನಿ ಲಲಿತಾ, ಪುತ್ರ ಜಿ.ಡಿ. ಹರೀಶ್ ಇದ್ದರು.